ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹೆಸರಲ್ಲಿ 60ನೇ ವರ್ಷದಲ್ಲಿ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸಹಪಾಠಿಗಳು

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸ್ವಾರಸ್ಯಕರ ಘಟನೆ ನಡೆದಿದೆ.

ವೆಳ್ಳರಿಕುಂಡ್‌ಗೆ ಸಮೀಪದ ಮಾಲೋಂ ವೆಟ್ಟಕೊಂಬಿಲ್ ಬಾಬು (62) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರು ನಾಲ್ಕನೇ ಕ್ಲಾಸಿನಲ್ಲಿ ಸಹಪಾಠಿಯಾಗಿದ್ದ ಮಾಲೋಂ ನಿವಾಸಿ ಆಗಿರುವ ಬಾಲಕೃಷ್ಣನ್ (62) ಹಾಗೂ ಅವರ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯು (61) ಎಂಬವರ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರ ಬಾಬು ಮತ್ತು ಬಾಲಕೃಷ್ಣನ್ ತಮ್ಮ ಚಿಕ್ಕ ವಯಸ್ಸಿನಲ್ಲಿ ನಾಲ್ಕನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರು. ಆಗ ಅವರ ಮಧ್ಯೆ ಜಗಳ ನಡೆದಿತ್ತು. ಅದಾದ ವರ್ಷಗಳ ನಂತರ ಈ ಇಬ್ಬರು ತಮ್ಮ ೬೦ನೇ ವರ್ಷದಲ್ಲಿ ಒಂದು ವಾರದ ಹಿಂದೆ ಪರಸ್ಪರ ಕಂಡಾಗ ತಮ್ಮ ಬಾಲ್ಯಕಾಲದಲ್ಲಿ ನಡೆದ ಹಳೇ ಜಗಳದ ಹೆಸರಲ್ಲಿ ಅವರಿಬ್ಬರ ಮಧ್ಯೆ ಪರಸ್ಪರ ವಾಗ್ವಾದ ನಡೆದು, ಅದು ಇನ್ನೇನು ಜಗಳದತ್ತ ಸಾಗುತ್ತಿರುವುದನ್ನು ಕಂಡು ಊರವರು ಅವರಿಬ್ಬರನ್ನು ಆಗ ತಡೆದಿದ್ದರು.  ಅದಾದ ಬಳಿಕ ಬಾಬು ಮತ್ತು ಬಾಲಕೃಷ್ಣನ್ ಮೊನ್ನೆ ವೆಳ್ಳರಿಕುಂಡ್ ಪೇಟೆಯಲ್ಲಿ ಮತ್ತೆ ಮುಖಾಮುಖಿ ಯಾಗಿ ಹಳೇ ದ್ವೇಷದ ಹೆಸರಲ್ಲಿ ಮತ್ತೆ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಬಾಬು ಗಾಯಗೊಂಡು ನಂತರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಾಲಕೃಷ್ಣನ್ ಮತ್ತು ಮ್ಯಾಥ್ಯು ಸೇರಿ ಕಲ್ಲಿನಿಂದ ತನ್ನ ಮುಖ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಬು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page