ಶೆಡ್‌ನಲ್ಲಿ ಇರಿಸಿದ್ದ ತೆಂಗಿನಕಾಯಿ ಕದ್ದ ಆರೋಪಿಗಳಿಬ್ಬರು ಸೆರೆ

ಕಾಸರಗೋಡು: ಶೆಡ್‌ನಲ್ಲಿ ಇರಿಸಲಾಗಿದ್ದ 200 ತೆಂಗಿನ ಕಾಯಿಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಪಡನ್ನಕ್ಕಾಡ್ ತೀರ್ಥಂಕರ ಕನ್ನಿಚ್ಚಿರ ನಿವಾಸಿ ಕೆ. ರಾಜೇಶ್ (42), ಕೆ. ರತೀಶ್ (45) ಎಂಬಿವರನ್ನು ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತ್ತೀಚೆಗೆ ತೀರ್ಥಂಕರದ ಒಂದು ಶೆಡ್‌ನಲ್ಲಿ ಇರಿಸಲಾಗಿದ್ದ ೨೦೦ ತೆಂಗಿನಕಾಯಿಗಳನ್ನು ಆರೋಪಿಗಳು ಕಳವುಗೈದು ಮಾರಾಟ ಮಾಡಿದ್ದರು. ಅಂಗಡಿ ಮಾಲಕ ಎಲ್ಲಿಂದ ತೆಂಗಿನ ಕಾಯಿ ಲಭಿಸಿರುವುದಾಗಿ ಪ್ರಶ್ನಿಸಿದಾಗ ಹೊಳೆಯಲ್ಲಿ ಹರಿದು ಬಂದ ತೆಂಗಿನ ಕಾಯಿಗಳಾಗಿವೆ ಎಂದು ಆರೋಪಿಗಳು ತಿಳಿಸಿದರು. ತೆಂಗಿನಕಾಯಿ ಕಳವಿಗೆ ಸಂಬಂಧಿಸಿದ ದೂರಿನಂತೆ ಕೇಸು ದಾಖಲಿಸಿ ಪೊಲೀಸರು ತನಿಖೆಗಾಗಿ  ತೆಂಗಿನಕಾಯಿ ಮಾರಾಟದಂಗಡಿಗಳಲ್ಲಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ತಿಳಿದು ಬಂದಿದೆ. ಆರೋಪಿಗಳನ್ನು ತೀರ್ಥಂಕರಕ್ಕೆ ಕೊಂಡೊಯ್ದು ಅವರಿಂದ ಹೇಳಿಕೆ ದಾಖಲಿಸಲಾಗಿದೆ. ತೆಂಗಿನಕಾಯಿಗೆ ಗರಿಷ್ಠ ಬೆಲೆ ಲಭಿಸುವ ಹಿನ್ನೆಲೆಯಲ್ಲಿ ಕಳವು ವ್ಯಾಪಕಗೊಂಡಿದೆ ಎಂದು ದೂರಲಾಗಿದೆ. ಬೇಡಗಂ, ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ತೆಂಗಿನಕಾಯಿ ಕಳವು ಪ್ರಕರಣಗಳು ದಾಖಲಾಗಿತ್ತು.

You cannot copy contents of this page