ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಬಿದ್ದು ಹೋಟೆಲ್ ಮಾಲಕನಿಗೆ ಗಾಯ
ಮುಳ್ಳೇರಿಯ: ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ವೊಂದು ಬುಡಸಮೇತ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಆಟೋರಿಕ್ಷಾ ಪೂರ್ಣವಾಗಿ ಹಾನಿಗೊಂಡಿದೆ. ಚೆರ್ಕಳ- ಜಾಲ್ಸೂರು ರಸ್ತೆಯ ಮುಳ್ಳೇರಿಯ ಆಲಂತಡ್ಕ ಇಳಿಜಾರಿನಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಆದೂರು ಸಿಎ ನಗರ ನಿವಾಸಿಯೂ, ಮುಳ್ಳೇರಿಯದಲ್ಲಿ ಹೋಟೆಲ್ ಮಾಲಕನಾದ ಅಬ್ದುಲ್ಲ ಕುಂಞಿ ಎಂಬವರು ಗಾಯಗೊಂಡಿದ್ದಾರೆ. ಅಬ್ದುಲ್ಲ ಕುಂಞಿಯ ಕೈಯ ಎಲುಬು ಮುರಿದಿರುವುದಾಗಿಯೂ, ಒಂದು ಬೆರಳು ನಷ್ಟಗೊಂಡಿರು ವುದಾಗಿ ಹೇಳಲಾಗುತ್ತಿದೆ. ಅವರನ್ನು ಮುಳ್ಳೇರಿಯದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಎ ನಗರದ ಮನೆಯಿಂದ ಮುಳ್ಳೇರಿಯದಲ್ಲಿ ಅವರು ನಡೆಸುವ ಹೋಟೆಲ್‌ಗೆ ಸ್ವಂತ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ಅಪಘಾತವುಂಟಾಗಿದೆ. ಮುಳ್ಳೇರಿಯ ಭಾಗದಲ್ಲಿ ರಸ್ತೆ ಬದಿ ಹಲವು ಬೃಹತ್ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಎರಡು ವರ್ಷ ಹಿಂದೆ ರಸ್ತೆ ಬದಿಯ ಮರಬಿದ್ದು ಪ್ರಯಾಣಿಕನಾದ ಸಾಜಿದ್ ಎಂಬವರು ಮೃತಪಟ್ಟಿದ್ದರು. ಇನ್ನೊಂದು ಅಪಘಾತದಲ್ಲಿ ಮರ ಬಿದ್ದು ಬೆನ್ನೆಲುಬಿಗೆ ಗಾಯಗೊಂಡ ಸಾಬ್ರು ಎಂಬವರು ವರ್ಷಗಳಿಂದ ಎದ್ದೇಳಲಾಗದೆ ಈಗಲೂ ಗಾಲಿ ಕುರ್ಚಿಯಲ್ಲಿ ಅತ್ತಿತ್ತ ತೆರಳುತ್ತಿದ್ದಾರೆ. ಹಾಗಿದ್ದರೂ ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಲೋಕೋಪಯೋಗಿ ಇಲಾಖೆ ನಿಧಿಯಂತೆ ಕಾಪಾಡಿಕೊಂಡು ಬರುತ್ತಿದೆ. ಈ ರೀತಿಯ ಅಪಾಯಕಾರಿ ಮರಗಳನ್ನು ಯಾರಾದರೂ ಮುಟ್ಟಿದಲ್ಲಿ ಅವರನ್ನು ಕೇಸಿನಲ್ಲಿ ಸಿಲುಕಿಸುತ್ತಿರುವು ದನ್ನು ನಾಗರಿಕರು ಹೇಳುತ್ತಿದ್ದಾರೆ. ಅದಕ್ಕೆಲ್ಲಾ ಸಹಾಯವೊದಗಿಸಲು ಸರಕಾರವೂ ಅವರೊಂದಿಗೆ ಇದೆ ಎಂದು ನಾಗರಿಕರು ತಮ್ಮ ಅನುಭವಗಳಿಂದ ಹೇಳುತ್ತಿದ್ದಾರೆ.