ಕುಂಬಳೆ: ಸಂಚರಿಸುತ್ತಿದ್ದ ಕಾರಿನ ಮೇಲೆ ಮಣ್ಣು ಹಾಗೂ ಮರ ಬಿದ್ದು ಚಾಲಕ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಬಾಡೂರು ಧರ್ಮತ್ತಡ್ಕ ತಲಮೊಗರು ಎಂಬಲ್ಲಿ ಘಟನೆ ನಡೆದಿದೆ. ತಲಮೊಗರು ನಿವಾಸಿ ಹಾರಿಸ್ ಕಾರಿನಲ್ಲಿ ಮನೆಯಿಂದ ಬರುತ್ತಿದ್ದಾಗ ತಲಮೊಗರುವಿನಲ್ಲಿರುವ ಗುಡ್ಡೆ ಕುಸಿದು ರಸ್ತೆಗೆ ಬಿದ್ದಿದೆ. ಈವೇಳೆ ಮಣ್ಣು, ಮರಗಳು ಕಾರಿನ ಮೇಲೆ ಬಿದ್ದಿದ್ದು, ಕೂಡಲೇ ಕಾರಿನಿಂದಿಳಿದು ಓಡಿದುದರಿಂದ ಹಾರಿಸ್ ಅಪಾಯದಿಂದ ಪಾರಾಗಿದ್ದಾರೆ. ಮಣ್ಣು ಅಗೆಯುವ ಯಂತ್ರ ಬಳಸಿ ಮಣ್ಣು ಹಾಗೂ ಮರಗಳನ್ನು ತೆರವುಗೊಳಿಸಿ ಕಾರನ್ನು ಹೊರತೆಗೆಯಲಾಯಿತು. ಇದೇ ವೇಳೆ ಮಣ್ಣು ಕುಸಿದ ಪರಿಣಾಮ ಸಮೀಪದಲ್ಲಿರುವ ಸಿಪಿಎಂ ಕಚೇರಿ ಹಾನಿಯಾಗಿದೆ. ಮಣ್ಣು ಕುಸಿದ ಸ್ಥಳದಲ್ಲಿ ನಾಲ್ಕರಷ್ಟು ಕುಟುಂಬಗಳು ವಾಸಿಸುತ್ತಿವೆ. ಅವರು ಕೂಡಾ ಇದೀಗ ಭಯಭೀತರಾಗಿದ್ದಾರೆ. ಗುಡ್ಡೆ ಕುಸಿತ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಅತ್ತ ಗಮನಹರಿಸಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
