ಸಂತ್ರಸ್ತರ ಸಂಕಷ್ಟ ಆಲಿಸಲು ವಯನಾಡಿಗೆ ಆಗಮಿಸಿದ ಪ್ರಧಾನಿ ಮೋದಿ
ವಯನಾಡು: ಇಡೀ ದೇಶವನ್ನೇ ನಡುಗಿಸಿರುವ ವಯನಾಡು ಭೂ ಕುಸಿತ ದುರಂತ ಸಂಭವಿಸಿದ ಪ್ರದೇಶಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂದರ್ಶಿಸಿದರು. ಅವರು ವಯನಾಡ್‌ನಲ್ಲಿ ಸಂತ್ರಸ್ತರ ಸಂಕಷ್ಟಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಲಿದ್ದಾರೆ. ಮಾತ್ರವಲ್ಲ ಸಂತ್ರಸ್ತ ಶಿಬಿರಗಳಲ್ಲಿ ಕಳೆಯುತ್ತಿರುವವರೊಂದಿಗೆ ಪ್ರಧಾನಿ ಸಂವಾದ ನಡೆಸುವರು.
ದಿಲ್ಲಿಯಿಂದ ಬೆಳಿಗ್ಗೆ ಕಣ್ಣೂರಿಗೆ ಆಗಮಿಸಿದ ಪ್ರಧಾನಿಯವರು ಅಲ್ಲಿಂದ ಭೂ ಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು. ನಂತರ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಲಿರುವ ಮೋದಿ ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ನಂತರ ಘಟನೆ ಮತ್ತು ಪ್ರಸ್ತುತ ಪರಿಹಾರ ಕಾರ್ಯಾಚರಣೆಗಳ ಮಾಹಿತಿ ಪಡೆಯಲು ಪ್ರಧಾನಿಯವರು ಪರಿಶೀಲನಾ ಸಭೆಯಲ್ಲಿ ಭಾಗವಹಿ ಸುವರು. ಇದರಲ್ಲಿ ವಿವಿಧ ಇಲಾಖೆಗಳ ಉನ್ನತ ಮಟ್ಟದ ಹಾಗೂ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವಯನಾಡು ಸಂತ್ರಸ್ತರಿಗಾಗಿ ಪ್ರಧಾನಮಂತ್ರಿ ಸಮಗ್ರ ಪುನರ್ವಸತಿ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇದೆ. ಇದಕ್ಕಾಗಿರುವ ಬೇಡಿಕೆಯನ್ನು ಕೇರಳ ಸರಕಾರ ಈಗಾಗಲೇ ಪ್ರಧಾನಮಂತ್ರಿಯ ಮುಂದಿರಿಸಿದೆ. ಪ್ರಧಾನಿಯವರು ಸಂದರ್ಶಿಸಿದ ಹಿನ್ನೆಲೆಯಲ್ಲಿ ದುರಂತ ಪೀಡಿತ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.