ಸಮುದ್ರಕ್ಕೆ ಬಿದ್ದು ಇಬ್ಬರು ಯುವಕರು ಮೃತ್ಯು
ಕಾಸರಗೋಡು: ಮೀನು ಗಾರಿಕೆಯಲ್ಲಿ ನಿರತನಾಗಿದ್ದ ಯುವಕಮೋರ್ವ ಸಮುದ್ರಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲೆತ್ನಿಸಿದ ರಕ್ಷಣಾ ಕಾರ್ಯಕರ್ತನೂ ಸಮುದ್ರದ ಅಲೆಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ನೀಲೇಶ್ವರ ಅಳಿತ್ತಲ ತೆಕ್ಕೇಕಡಪ್ಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನೀಲೇಶ್ವರ ತೈಕಡಪ್ಪುರದ ಬೋಟ್ ಜೆಟ್ಟಿ ಪರಿಸರ ನಿವಾಸಿಯಾದ ಪಿ.ವಿ. ರಾಜೇಶ್ (೩೬) ಮತ್ತು ಅವರನ್ನು ರಕ್ಷಿಸಲು ಸಮುದ್ರಕ್ಕೆ ಜಿಗಿದ ಮೀನುಗಾರಿಕೆ ಇಲಾಖೆಯ ಬೋಟ್‌ನ ರೆಸ್ಕ್ಯೂ ಗಾರ್ಡ್ ಎಂ. ಸನೀಶ್ (೩೪) ಅವಘಡದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.
ನಿನ್ನೆ ಸಂಜೆ ಸುಮಾರು ೫ ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ರಾಜೇಶ್ ತನ್ನ ಸಹೋದರ ಉಮೇಶ್‌ರ ಜತೆ ತೈಕಡಪ್ಪುರ ಬಳಿ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದಿದ್ದಾರೆ. ಆಗ ಆಳೆತ್ತರದ ಅಲೆಗಳು ಅಪ್ಪಳಿಸಿ ರಾಜೇಶ್ ಸಮುದ್ರಕ್ಕೆ ಬಿದ್ದರು. ಅದನ್ನು ಕಂಡು ಅಲ್ಲೇ ಇದ್ದ ಸನೀಶ್ ಅವರನ್ನು ರಕ್ಷಿಸಲು ಸಮುದ್ರಕ್ಕೆ ಧುಮುಕಿದರು. ಆಗ ಅವರೂ ಸಮುದ್ರದ ಅಲೆಯಲ್ಲಿ ಸಿಲುಕಿಕೊಂಡರು. ತಕ್ಷಣ ನೀಡಲಾದ ಮಾಹಿತಿಯಂತೆ ಕರಾವಳಿ ಪೊಲೀಸರು ಅಲ್ಲಿಗೆ ಆಗಮಿಸಿ ಊರವರ ಸಹಾಯದಿಂದ ಅವರಿಬ್ಬರನ್ನು ಸಮುದ್ರದಿಂದ ಮೇಲಕ್ಕೆತ್ತಿ ನೀಲೇಶ್ವರದ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹಗಳನ್ನು ನಂತರ ಜಿಲ್ಲಾ ಸಹಕಾರಿ ಆಶ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿ ಸಲಾಯಿತು. ದಿ| ಮಲ್ಲಕೆರೆ ದಾಮೋದರನ್-ಕಲ್ಯಾಣಿ ದಂಪತಿಯ ಪುತ್ರನಾದ ರಾಜೇಶ್ ಸಹೋದರ ಉಮೇಶನ್, ಸಹೋದರಿಯರಾದ ಚಿತ್ರ, ನಿಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ತೆಕ್ಕೇಕಡಪ್ಪುರದ ಭರತನ್-ಪದ್ಮಿನಿ ದಂಪತಿ ಪುತ್ರನಾದ ಎಂ. ಸನೀಶ್ ಕಳೆದ ಐದು ವರ್ಷಗಳಿಂದ ರೆಸ್ಕ್ಯೂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನೀಲೇಶ್ವರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.