ಸರಕು ಸೇವಾ ತೆರಿಗೆ ಕಚೇರಿಗಳನ್ನು ಕಾಞಂಗಾಡ್ ಭಾಗಕ್ಕೆ ಸ್ಥಳಾಂತರಿಸಲು ಹುನ್ನಾರ: ಕಾಸರಗೋಡು, ಮಂಜೇಶ್ವರದವರಿಗೆ ಸಮಸ್ಯೆ
ಕಾಸರಗೋಡು: ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ಕಾರ್ಯಾಚರಿಸುವ ಕೇರಳ ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯ ಕಾರ್ಯಾಲಯಗಳನ್ನು ಸಾಮೂಹಿಕವಾಗಿ ಕಾಞಂಗಾಡ್, ಚೆರ್ವತ್ತೂರು ವಲಯಕ್ಕೆ ಬದಲಿಸಲು ಯತ್ನ ನಡೆಯುತ್ತಿರುವುದಾಗಿ ಆರೋಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸಬೇಕಾದ ಇಂಟೆಲಿಜೆನ್ಸ್ ಡೆಪ್ಯುಟಿ ಕಮಿಶನರ್‌ರ ಕಾರ್ಯಾಲಯ ಹಾಗೂ ಕಾಸರಗೋಡು ಇಂಟೆಲಿಜೆನ್ಸ್ ಘಟಕ ಕಚೇರಿಯನ್ನು ಕೆಲವು ಅಧಿಕಾರಿಗಳ ಒತ್ತಾಸೆಗೆ ಮಣಿದು ಕಾಞಂಗಾಡ್‌ನ ಒಂದು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ೩೦ ಸಾವಿರ ರೂ. ಇಲ್ಲಿ ಪ್ರತಿ ತಿಂಗಳು ಬಾಡಿಗೆ ನೀಡಬೇಕಾಗಿದೆ. ೨೦೧೯ರಲ್ಲಿ ಈ ಕಚೇರಿಯನ್ನು ಕಾಞಂಗಾಡ್‌ಗೆ ಸ್ಥಳಾಂತರಿಸಿದಾಗ ಅಂದಿನ ಜನಪ್ರತಿನಿಧಿಗಳು ಆಗ್ರಹಿಸಿದಂತೆ ಜಿಲ್ಲಾಧಿಕಾರಿ ಆದೇಶ ನೀಡಿ ಪುನಃ ಕಾಸರಗೋಡಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಮತ್ತೆ ಈ ಕಚೇರಿಯನ್ನು ಸ್ಥಳಾಂತರಿಸಲು ಯತ್ನ ನಡೆಯುತ್ತಿದೆ ಎನ್ನಲಾಗಿದೆ. ಇದಲ್ಲದೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸಬೇಕಾದ ಡೆಪ್ಯುಟಿ ಕಮಿಶನರ್‌ರ ಆಡಿಟ್‌ನ ೩ ವಿಂಗ್‌ಗಳು ಈಗಲೂ ಕಾಞಂಗಾಡ್‌ನಲ್ಲೇ ಕಾರ್ಯಾಚರಿಸುತ್ತಿದೆ. ಕಾಸರಗೋಡು ರೈಲು ನಿಲ್ದಾಣದ ಮುಂಭಾಗವಿದ್ದ ಇನ್‌ಸ್ಪೆಕ್ಟಿಂಗ್ ಅಸಿಸ್ಟೆಂಟ್ ಕಮಿಶನರ್ ಕಚೇರಿಯನ್ನು ಕಾಞಂಗಾಡ್‌ಗೆ ಬದಲಿಸಲಾಗಿದೆ. ಈ ಎಲ್ಲಾ ಕಚೇರಿಗಳು ಕಾಞಂಗಾಡ್‌ನಲ್ಲಿ ಕಾರ್ಯಾಚರಿಸಿದರೆ ಮಂಜೇಶ್ವರ, ಕಾಸರಗೋಡು ಪ್ರದೇಶದ ವ್ಯಾಪಾರಿಗಳು, ಸಂಬಂಧಪಟ್ಟ ಸಂಸ್ಥೆಗಳಿಗೂ ಸಮಸ್ಯೆ ಇಮ್ಮಡಿಯಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.