ಸರ್ಪಂಗಳ ನಿವಾಸಿ ಸೆಂಟ್ರಿಂಗ್ ಕಾರ್ಮಿಕ ಕಬಕದಲ್ಲಿ ರೈಲು ಢಿಕ್ಕಿ ಹೊಡೆದು ಮೃತ್ಯು
ಪೆರ್ಲ: ಸರ್ಪಂಗಳ ನಿವಾಸಿ ಸೆಂಟ್ರಿಂಗ್ ಕಾರ್ಮಿಕ ಪುತ್ತೂರಿನ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು, ರಾತ್ರಿ ವೇಳೆ ಊರಿಗೆ ತಂದು ಮೃತದೇಹದ ಸಂಸ್ಕಾರ ನಡೆಸಲಾಯಿತು. ಉಕ್ಕಿನಡ್ಕ ಸಮೀಪದ ಸರ್ಪಂಗಳ ನಿವಾಸಿ ತಿಮ್ಮ ನಾಯ್ಕ ಎಂಬವರ ಪುತ್ರ ಚನಿಯಪ್ಪ ಅಲಿಯಾಸ್ ರಾಧಾಕೃಷ್ಣ ನಾಯ್ಕ (46) ಮೃತಪಟ್ಟವರು. ಸೆಂಟ್ರಿಂಗ್ ಕಾರ್ಮಿಕನಾಗಿರುವ ಇವರು ಪುತ್ತೂರು ಸಮೀಪದ ಕಬಕ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರೆನ್ನಲಾಗಿದೆ. ಬುಧವಾರ ಬೆಳಿಗ್ಗೆ ಇವರು ಮನೆಯಿಂದ ಕೆಲಸಕ್ಕೆಂದು ತೆರಳಿದ್ದು, ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ ರೈಲು ಹಳಿ ದಾಟುವಾಗ ರೈಲು ಢಿಕ್ಕಿ ಹೊಡೆದಿರಬೇಕೆಂದು ಶಂಕಿಸ ಲಾಗಿದ್ದು, ಮೃತದೇಹದ ಕಾಲು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
ಮೃತರು ತಂದೆ, ತಾಯಿ ರಾಧಾವತಿ, ಪತ್ನಿ ಸುಮತಿ, ಮಕ್ಕಳಾದ ಸಪ್ತಮಿ, ಸಾತ್ವಿಕ್, ಸಹೋದರರಾದ ರಾಜ್‌ಕುಮಾರ್, ಯೋಗೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ರೈಲ್ವೇ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.