ಸಾರ್ವಜನಿಕ ಸ್ಥಳದಿಂದ ಮರ ಕಡಿದು ಸಾಗಾಟ: ಇನ್ನೋರ್ವ ಸೆರೆ

ಕಾಸರಗೋಡು: ಸಾರ್ವಜನಿಕ ಪ್ರದೇಶದಿಂದ ಮರ ಕಡಿದು ಸಾಗಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಪುದಿಯಕಂಡಂ ಮುರಳಿ ಅಲಿಯಾಸ್ ಗಿರಿಜಾ ಮುರಳಿ (53) ಬಂಧಿತರಾದ ಆರೋಪಿ. ಈತ ತಲೆಮರೆಸಿಕೊಂಡಿದ್ದನು. ನಂತರ ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಅದನ್ನು ಪರಿಶೀಲಿಸಿದ ನ್ಯಾಯಾಲಯ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ  ನಿರ್ದೇಶ ನೀಡಿತ್ತು. ಅದರಂತೆ ಆತ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದನು. ನಂತರ ಪೊಲೀಸರು ಬಂಧಿಸಿದ್ದಾರೆ.

ಇದೇ ಪ್ರಕರಣದ ಇತರ ಆರೋಪಿಗಳಾದ ಮೋನೋಚ್ಚಾಲ್‌ನ ಕೆಎಸ್. ಗಿರೀಶನ್ (41), ನಾರಾಯಣನ್ (64) ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.

ಹೊಸದುರ್ಗ ಮಾವುಂಗಾಲ್ ರಾಜ್ಯ ಹೆದ್ದಾರಿಯ ಪುದಿಯಕಂಡನ ಸಾರ್ವಜನಿಕ ಪ್ರದೇಶದ ಮರವೊಂದನ್ನು ಒಂದು ತಿಂಗಳ ಹಿಂದೆ ಕಡಿದು ಸಾಗಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

You cannot copy contents of this page