ಸಾಲ ತೆಗೆದು ಸ್ಮಾರ್ಟ್ ಫೋನ್ ಖರೀದಿಸಿದ ಪತ್ನಿಗೆ ಇರಿದ ಪತಿ: ಚಿಕಿತ್ಸೆ ಮಧ್ಯೆ ಯುವತಿ ಮೃತ್ಯು
ತೃಶೂರು: ಪತಿ ಇರಿದು ಗಾಯಗೊಳಿಸಿದ ಯುವತಿ ಮೃತಪಟ್ಟರು. ಅಷ್ಟಮಿಚ್ಚಿರ ನಿವಾಸಿ ಗ್ರೀಷ್ಮಾ (35) ಮೃತಪಟ್ಟ ಯುವತಿ. ಜನವರಿ 29ರಂದು ರಾತ್ರಿ ಪತಿ ವಾಸನ್ ಗ್ರೀಷ್ಮಾಳನ್ನು ಇರಿದು ಗಾಯಗೊಳಿಸಿದ್ದನು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮಕ್ಕಳ ಮುಂಭಾಗದಲ್ಲೇ ಕತ್ತಿಯಿಂದ ಗ್ರೀಷ್ಮಾಳಿಗೆ ಕಡಿದು ಕೈಕಾಲುಗಳಿಗೆ ಗಂಭೀರ ಗಾಯಗೊಳಿಸಿದ್ದನು. ಬಳಿಕ ಈಕೆಯನ್ನು ಎರ್ನಾಕುಳಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮುಂಜಾನೆ ಈಕೆ ಮೃತಪಟ್ಟಿದ್ದಾರೆ. ಇದೇ ವೇಳೆ ಸಾಲ ತೆಗೆದು ಸ್ಮಾರ್ಟ್ ಫೋನ್ ಖರೀದಿಸಿರುವುದೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಸೂಪರ್ ಮಾರ್ಕೆಟ್‌ನಲ್ಲಿ ನೌಕರೆಯಾದ ಗ್ರೀಷ್ಮಾ ಸಾಲ ತೆಗೆದು ಸ್ಮಾರ್ಟ್ ಫೋನ್ ಖರೀದಿಸಿದ್ದರು. ಯಾವುದೇ ಕೆಲಸಕ್ಕೆ ತೆರಳದ ಪತಿ ಇದನ್ನು ಪ್ರಶ್ನಿಸಿದ್ದು, ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿತ್ತು. ಇನ್ನೋರ್ವ ಯುವಕನೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಕುಟುಂಬ ಕಲಹ ಉಂಟಾಗಿತ್ತು. ಈ ಮಧ್ಯೆ ಅಡುಗೆ ಕೋಣೆಯಿಂದ ಕತ್ತಿ ತಂದು ಮಕ್ಕಳ ಎದುರಲ್ಲೇ ಗ್ರೀಷ್ಮಾಳಿಗೆ ಕಡಿದಿದ್ದನು. ಪತಿ ವಾಸನ್‌ನನ್ನು ಅಂದೇ ಸೆರೆ ಹಿಡಿಯಲಾಗಿತ್ತು. ಈತನ ವಿರುದ್ಧ ಕೊಲೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.