ಸಾವಿನಲ್ಲೂ ಸಾರ್ಥಕತೆ ಮೆರೆದ ಸೀತಾರಾಂ ಯೆಚ್ಚೂರಿ
ನವದೆಹಲಿ: ಶ್ವಾಸಕೋಶ ಸಂಬಂಧಿತ ಅಸೌಖ್ಯದಿಂದ ನಿಧನ ಹೊಂದಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸೀತಾರಾಂ ಯೆಚ್ಚೂರಿಯವರ ಅಗಲುವಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರಿಂದ ಸಂತಾಪಗಳ ಮಹಾಪೂರವೇ ಹರಿದುಬರತೊಡಗಿದೆ.
ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಯೆಚ್ಚೂರಿಯವರನ್ನು ಕೆಲವು ದಿನಗಳ ಹಿಂದೆ ದೆಹಲಿಯ ಏಮ್ಸ್ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಯೆಚ್ಚೂರಿಯವರ ಸ್ವ ಇಚ್ಛೆಯಂತೆ ಅವರ ಪಾರ್ಥೀವ ಶರೀರವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಹಸ್ತಾಂತರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತದೇಹವನ್ನು ದೆಹಲಿಯ ಎಕೆಜಿ ಭವನದಲ್ಲಿ ನಾಳೆ ಬೆಳಿಗ್ಗಿನಿಂದ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಇಂದು ಸಂಜೆ ವಸಂತ್ ಕುಂಚ್ನಲ್ಲಿರುವ ಯೆಚ್ಚೂರಿಯವರ ಸ್ವ ನಿವಾಸಕ್ಕೆ ಸಾಗಿಸಲಾಗುವುದು. ನಾಳೆ ಅಪರಾಹ್ನ ೩ಗಂಟೆಗೆ ಅಂತಿಮ ವಿಧಿ ವಿಧಾನದ ಬಳಿಕ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯ ನಕ್ಕಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಲಾಗುವುದೆಂದು ಕುಟುಂ ಬಸ್ಥರು ತಿಳಿಸಿದ್ದಾರೆ. ಆ ಮೂಲಕ ಸೀತಾರಾಂ ಯೆಚ್ಚೂರಿಯವರು ಸಾವಿ ನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ ಎನಿಸಿ ಕೊಂಡಿದ್ದಾರೆ. ಯೆಚ್ಚೂರಿ ನಿಧನದ ಶೋಕಾಚರಣೆಯಂಗವಾಗಿ ಸಿಪಿಎಂ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಮೂರು ದಿನಗಳ ತನಕ ಮುಂದೂಡಿದೆ. ಯೆಚ್ಚೂರಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಸಂತಾಪ ಸೂಚಿಸಿದ್ದು, ಸೀತಾರಾಮ ಯೆಚ್ಚೂರಿಯವರ ನಿಧನದಿಂದ ದುಃಖವಾಗಿದೆ. ಅವರು ಎಡಪಕ್ಷಗಳ ಪ್ರಮುಖ ಬೆಳಕು ಮತ್ತು ರಾಜಕೀಯದಲ್ಲಿ ಉತ್ತಮ ಸಂಪರ್ಕ ಸಾಧಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಓರ್ವ ಅತ್ಯುತ್ತಮ ಸಂಸದರಾಗಿ ಗುರುತಿಸಿಕೊಂಡವರು. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ತಡೆಯುವ ಶಕ್ತಿ ಕೊಡಲಿ ಎಂದು ಪ್ರಧಾನಿ ದುಃಖ ಸಂದೇಶದಲ್ಲಿ ಹೇಳಿದ್ದಾರೆ. ಮಾತ್ರವಲ್ಲ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹೆಚ್ಚಿನ ಎಲ್ಲಾ ಪಕ್ಷಗಳ ಗಣ್ಯ ನೇತಾರರು ಹಾಗೂ ವಿವಿಧ ಸ್ಥರಗಳ ಗಣ್ಯರೂ ಯೆಚ್ಚೂರಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.