ಸಿನೆಮಾ, ಮಿಮಿಕ್ರಿ ತಾರೆ ಕಲಾಭವನ್ ನವಾಸ್ ನಿಧನ
ಕೊಚ್ಚಿ: ಚಲನಚಿತ್ರ ಹಾಗೂ ಮಿಮಿಕ್ರಿ ನಟನೂ ಆಗಿರುವ ಕಲಾಭವನ್ ನವಾಸ್ (51) ನಿಧನ ಹೊಂದಿದರು. ಮಲಯಾಳಂ ಸಿನೆಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಳ್ಳಲು ಕಲಾಭವನ್ ನವಾಸ್ ಚೋಟಾಣಿಕ್ಕರೆಗೆ ಬಂದು ಹೋಟೆಲೊಂದರ ಕೊಠಡಿಯಲ್ಲಿ ತಂಗಿದ್ದರು. ಅಲ್ಲಿ ನಿನ್ನೆ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಿಮಿಕ್ರಿ ವೇದಿಕೆಗಳಲ್ಲಿ ಮಿಂಚಿದ್ದ ನವಾಸ್ ಬಳಿಕ ಮಲಯಾಳಂ ಸಿನೆಮಾರಂಗಕ್ಕೂ ಪ್ರವೇಶಿಸಿ ಹಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಅವರು ಕಲಾಭವನ್ ಮಿಮಿಕ್ರಿ ಟ್ರೂಪ್‌ನ ಸದಸ್ಯರೂ ಆಗಿದ್ದರು. ನಾಟಕ ಕಲಾವಿದರಾದ ಅಬೂಬಕ್ಕರ್‌ರ ಪುತ್ರನಾಗಿರುವ ಮೃತರು ಪತ್ನಿ ನಟಿ ರೆಹ್ನಾ, ಮಕ್ಕಳಾದ ನಹರಿನ್, ರಿದ್ವಾನ್, ರಿಹಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.