ಸಿಪಿಎಂನಿಂದ ಹಮಾಸ್ ಬೆಂಬಲ ಸಮಾವೇಶ ಮುಸ್ಲಿಂಲೀಗ್‌ಗೂ ಆಹ್ವಾನ; ಲೀಗ್ ತೀರ್ಮಾನ ನಾಳೆ
ಕಲ್ಲಿಕೋಟೆ: ಹಮಾಸ್‌ಗೆ ಬೆಂಬಲ ಪ್ರದರ್ಶಿಸಿ ನವಂಬರ್ ೧೧ರಂದು ಸಂಜೆ ೪ ಗಂಟೆಗೆ ಕಲ್ಲಿಕೋಟೆ ಟ್ರೇಡ್ ಸೆಂಟರ್‌ನಲ್ಲಿ ಸಮಾವೇಶ ನಡೆಸಲು ಸಿಪಿಎಂ ತೀರ್ಮಾನಿಸಿದೆ. ಅದರಲ್ಲಿ ಭಾಗವಹಿಸಲು ಯುಡಿಎಫ್‌ನ ಘಟಕ ಪಕ್ಷವಾದ ಮುಸ್ಲಿಂ ಲೀಗ್‌ಗೂ ಸಿಪಿಎಂ ಅಧಿಕೃತ ಆಹ್ವಾನ ನೀಡಿದೆ.
ಈ ಸಮಾವೇಶಕ್ಕೆ ನಮ್ಮ ಪಕ್ಷಕ್ಕೆ ಆಹ್ವಾನ ನೀಡಿದ್ದು ಸ್ವಾಗತಾರ್ಹವಾಗಿದೆ ಎಂದು ಮುಸ್ಲಿಂ ಲೀಗ್ ನೇತಾರ ಹಾಗೂ ಸಂಸದ ಇ.ಟಿ. ಅಹಮ್ಮದ್ ಬಷೀರ್ ಹೇಳಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ಭಾಗವಹಿಸಬೇಕೇ ಯಾ ಬೇಡವೇ ಎಂಬ ಬಗ್ಗೆ ಚರ್ಚಿಸಲು ನಾಳೆ ಮುಸ್ಲಿಂ ಲೀಗ್‌ನ ವಿಶೇಷ ಸಭೆ ಕರೆಯಲಾಗಿದೆಯೆಂದು ಲೀಗ್ ನೇತಾರರಾದ ಪಿಎಂಎ ಸಲಾಂ ಮತ್ತು ಎಂ.ಕೆ. ಮುನೀರ್ ತಿಳಿಸಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಮ್ಮ ಪಕ್ಷ ಬದ್ಧವಾಗಿದೆಯೆಂದೂ ಉಭಯ ನೇತಾರರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿಪಿಎಂ ನಡೆಸುವ ಈ ಸಮಾವೇಶಕ್ಕೆ ಕಾಂಗ್ರೆಸ್‌ಗೆ ಆಹ್ವಾನ ನೀಡಲಾಗಿಲ್ಲ. ಆದರೆ ಯುಡಿಎಫ್‌ನ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಸಮಾವೇಶದಲ್ಲಿ ಭಾಗವಹಿಸಲಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇದು ರಾಜಕೀಯ ವಿಷಯವಲ್ಲ. ಬದಲಾಗಿ ಇದು ವಿಷಯ ಬೇರೆಯೇ ಆಗಿದೆ. ಆದ್ದರಿಂದ ಈ ವಿಷಯದಲ್ಲಿ ರಾಜಕೀಯ ನೋಡಬೇಡಿ ಎಂದು ಅದಕ್ಕೆ ಪಿಎಂಎ ಸಲಾಂ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಪಿಎಂ ನೇತೃತ್ವದಲ್ಲಿ ನಡೆಯುವ ಸಮಾವೇಶಕ್ಕೆ ಮುಸ್ಲಿಂಲೀಗ್‌ಗೆ ಆಹ್ವಾನ ನೀಡಿರುವುದು ಕಾಂಗ್ರೆಸ್‌ನ್ನು ಇರಿಸುಮುರಿಸುಗೊಳಿಸಿದೆ. ಆಬಗ್ಗೆ ಕಾಂಗ್ರೆಸ್ ಈತನಕ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. ನವಂಬರ್ ೧೧ರಂದು ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಹಲವು ಗಣ್ಯರು ಭಾಗವಹಿಸುವರು.