ಸಿಪಿಎಂ ನೇತಾರರ ಮೇಲೆ ಬಾಂಬೆಸೆತ: ಸಿಪಿಎಂ ಬೆಂಬಲಿಗ ಸೆರೆ
ಕಾಸರಗೋಡು: ಅಂಬಲತ್ತರ ಪಾರಪಳ್ಳಿ ಎಂಬಲ್ಲಿ ಸಿಪಿಎಂ ನೇತಾರರ ಮೇಲೆ ಬಾಂಬೆಸೆದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಅಂಬಲತ್ತರ ಪೊಲೀಸರು ಸೆರೆಹಿ ಡಿದಿದ್ದಾರೆ. ಸಿಪಿಎಂ ಬೆಂಬಲಿಗನೂ, ಇರಿಯ ಮಾಟ್ಟಿಚ್ಚಿರಲ್ ಎಂಬಲ್ಲಿನ ಸಮೀರ್ (35) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ರತೀಶ್ ಎಂಬಾತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಇಬ್ಬರ ವಿರುದ್ಧ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ಗೃಹ ಸಂದರ್ಶನ ವೇಳೆ ಸಿಪಿಎಂ ನೇತಾರನ ಮೇಲೆ ರತೀಶ್ ಹಾಗೂ ಸಮೀರ್ ಸೇರಿ ಬಾಂಬೆಸೆದಿದ್ದಾರೆ. ಸಿಪಿಎಂ ಅಂಬಲತ್ತರ ಲೋಕಲ್ ಸೆಕ್ರೆಟರಿ ಅನೂಪ್, ಏಳನೇ ಮೈಲು ಲೋಕಲ್ ಸೆಕ್ರೆಟರಿ ಬಾಬುರಾಜ್, ಡಿವೈಎಫ್‌ಐ ವಲಯ ಕಾರ್ಯದರ್ಶಿ ಅರುಣ್ ಎಂಬಿವರು ಮಾಟ್ಟಿಚೆರಲ್ ತಟ್ಟ್‌ನ ಆಮಿನ ಎಂಬವರ ಮನೆಗೆ ಗೃಹ ಸಂದರ್ಶನಕ್ಕಾಗಿ ತಲುಪಿದ್ದರು. ಈ ವೇಳೆ ಬಾಂಬೆಸೆತವುಂಟಾಗಿದೆ. ಇದರಿಂದ ಆಮಿನ ಗಾಯಗೊಂಡಿದ್ದಾರೆ. ಸೆರೆಗೀಡಾದ ಸಮೀರ್ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾನೆ. ಮುಖ್ಯ ಆರೋಪಿ ರತೀಶ್ ಎಂಟು ವರ್ಷಗಳ ಹಿಂದೆ ಕಾಪಾ ಪ್ರಕರಣದಲ್ಲಿ ಸೆರೆಗೀಡಾಗಿದ್ದನು. ಸೆರೆಗೀಡಾದ ಸಮೀರ್ ಹಾಗೂ ಹೊಸದುರ್ಗ ನ್ಯಾಯಾಲಯ ರಿಮಾಂಡ್ ವಿಧಿಸಿದೆ.