ಸೇತುವೆಯಿಂದ ಹೊಳೆಗೆ ಹಾರಿದ ವ್ಯಕ್ತಿ ನಾಪತ್ತೆ: ವ್ಯಾಪಕ ಶೋಧ
ಕಾಸರಗೋಡು: ಕಾಸರಗೋಡಿನ ಒಂದು ‘ಸ್ಯೂಸೈಡ್ ಪೋಯಿಂಟ್’ (ಆತ್ಮಹತ್ಯಾ ಕೇಂದ್ರ) ಎಂದೇ ಈಗ ಕರೆಯಲ್ಪಡುತ್ತಿರುವ ಚಂದ್ರಗಿರಿ ಸೇತುವೆಯಿಂದ ನಿನ್ನೆ ಯುವಕನೋರ್ವ ಹೊಳೆಗೆ ಹಾರಿದ್ದಾನೆ. ಹೀಗೆ ಹೊಳೆಗೆ ಹಾರಿದಾತನನ್ನು ಸೂರ್ಲು ಮೀಪುಗುರಿ ನಿವಾಸಿ ಹಾಗೂ ವರ್ಕ್‌ಶಾಪ್ ಅಂಗಡಿ ನಡೆಸುತ್ತಿರುವ ಗಿರೀಶ್ ಎಂದು ಗುರುತಿಸಲಾಗಿದೆ.
ಈ ಘಟನೆ ನಿನ್ನೆ ನಡೆದಿದೆ. ಬೈಕ್‌ನಲ್ಲಿ ಬಂದ ಇವರು ಮತ್ತೆ ಅದರ ಕೀಲಿ, ಪರ್ಸ್ ಮತ್ತು ಚಪ್ಪಲಿಯನ್ನು ಸೇತುವೆಯಲ್ಲಿರಿಸಿ ಎಲ್ಲರೂ ನೋಡುತ್ತಿರುವಂತೆಯೇ ಸೇತುವೆ ಮೇಲಿನಿಂದ ಕೆಳಗ್ಗೆ ಹಾರಿದ್ದಾರೆ. ವಿಷಯ ತಿಳಿದ ಅಸಿಸ್ಟೆಂಟ್ ಸ್ಪೆಷಲ್ ಆಫೀಸರ್ ಎಂ.ಕೆ. ರಾಜೇಶ್ ಕುಮಾರ್‌ರ ನೇತೃತ್ವದಲ್ಲಿ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಡಿಂಗಿ ಸಹಾಯದಿಂದ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಿದರೂ ಹೊಳೆಗೆ ಹಾರಿದ ವ್ಯಕ್ತಿಯನ್ನು ಈತನಕ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶೋಧ ಕಾರ್ಯಾಚರಣೆ ಇಂದು ಬೆಳಗ್ಗಿನಿಂದ ಪುನರಾರಂಭಿಸಲಾಗಿದೆ. ಕಾಸರಗೋಡು ಪೊಲೀಸರೂ ಇನ್ನೊಂದೆಡೆ ಶೋಧ ನಡೆಸುತ್ತಿದ್ದಾರೆ.