ಸೌಮ್ಯ ಕೊಲೆ ಪ್ರಕರಣ: ಜೈಲು ಹಾರಿದ ತಾಸುಗಳೊಳಗೆ ಆರೋಪಿ ಗೋವಿಂದಚ್ಚಾಮಿ ಸೆರೆ
ಕಣ್ಣೂರು: ಕೇರಳವನ್ನೇ ನಡುಗಿಸಿದ್ದ ಶೊರ್ನೂರು ಮಂಜಕ್ಕಾಟ್ ನಿವಾಸಿ ಹಾಗೂ ಸೇಲ್ಸ್ ಗರ್ಲ್ ಆಗಿದ್ದ ಸೌಮ್ಯ (23) ಕೊಲೆ ಪ್ರಕರಣದ ಆರೋಪಿ ತಮಿಳುನಾಡು ನಿವಾಸಿ ಗೋವಿಂದ ಚ್ಚಾಮಿಯನ್ನು ಜೈಲು ಹಾರಿದ ತಾಸುಗಳೊಳಗೆ ಆತನ್ನು ಸೆರೆಹಿಡಿ ಯುವಲ್ಲಿ ಪೊಲೀಸರು ಸಫಲರಾಗಿ ದ್ದಾರೆ. ಇದಕ್ಕಾಗಿ ಪೊಲೀಸರಿಗೆ ಎಲ್ಲೆಡೆಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬರತೊಡಗಿದೆ.
ಅತೀವ ಭದ್ರತೆ ಹೊಂದಿರುವ ಕಣ್ಣೂರು ಸೆಂಟ್ರಲ್ ಜೈಲಿನ 10ನೇ ಬ್ಲಾಕ್‌ನ ಆರನೇ ಸೆಲ್‌ನಿಂದ ಇಂದು ಮುಂಜಾನೆ ೧.೧೫ರ ನಸುಕಿನ ವೇಳೆ ಗೋವಿಂದಚ್ಚಾಮಿ ಜೈಲಿನ ಹಿಂಭಾಗದ 7.5 ಮೀಟರ್‌ನಷ್ಟು ಎತ್ತರದಲ್ಲಿರುವ ಆವರಣಗೋಡೆಗೆ ಬಟ್ಟೆಕಟ್ಟಿ ಅದರ ಸಹಾಯದಿಂದ ಜೈಲು ಹಾರಿ ಜೈಲಿನ ಹಿಂದಿನ ಕಣ್ಣೂರು-ಕಾಸರಗೋಡು ಹೆದ್ದಾರಿ ಮೂಲಕ ಪರಾರಿಯಾಗಿದ್ದನು. ಜೈಲು ಹಾರಿದ ಬಗ್ಗೆ ಜೈಲು ಅಧಿಕಾರಿಗಳು ೭.೧೫ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಕಣ್ಣೂರು-ಕಾಸರಗೋಡು ಹೆದ್ದಾರಿ, ಗಡಿ ಪ್ರದೇಶ ಸೇರಿದಂತೆ ಶ್ವಾನದಳಗಳಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದರು. ಮಾತ್ರವಲ್ಲ ರಾಜ್ಯಾದ್ಯಂತ ಜಾಗ್ರತಾ ನಿರ್ದೇಶ ನೀಡಿದರು. ಕಣ್ಣೂರು ಸೆಂಟ್ರಲ್ ಜೈಲು ಮತ್ತು ಆ ಪರಿಸರದ ಎಲ್ಲಾ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಅದರಲ್ಲಿ ಆತ ಕಣ್ಣೂರು ನಗರದಲ್ಲಿ ನಡೆದುಹೋ ಗುವ ದೃಶ್ಯ ಗೋಚರಿಸಿದೆ. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಣ್ಣೂರು ನಗರದ ತಲ್ಲಾಪ್‌ನ ಜನವಾಸವಿಲ್ಲದ ಮನೆಯೊಂದರಿಂದ ಆತನನ್ನು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.
ಜೈಲು ಹಾರಲು ಈತನಿಗೆ ಜೈಲಿನ ಒಳಗಿಂದ ಅಥವಾ ಬಾಹ್ಯ ವ್ಯಕ್ತಿಗಳಿಂದ ಯಾವುದಾದರೂ ರೀತಿಯ ಸಹಾಯ ಲಭಿಸಿದೆಯೇ ಎಂಬ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಗೋವಿಂದಚ್ಚಾಮಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
2011 ಫೆಬ್ರವರಿ 1ರಂದು ಎರ್ನಾಕುಳಂನಿಂದ ಶೊರ್ನೂರಿಗೆ ಹೋಗುತ್ತಿದ್ದ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸೌಮ್ಯ (23)ಳ ಮೇಲೆ ಆರೋಪಿ ಗೋವಿಂದಚ್ಚಾಮಿ ಹಲ್ಲೆ ನಡೆಸಿ ಆಕೆಯನ್ನು ರೈಲಿನಿಂದ ಹೊರಕ್ಕೆ ದೂಡಿ ಹಾಕಿದ್ದು, ಗಾಯಗೊಂಡ ಆಕೆಯ ಮೇಲೆ ರೈಲು ಹಳಿಯಲ್ಲೇ ಅತ್ಯಾಚಾರ ನಡೆಸಿದ ಬಳಿಕ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದನು.