ಸ್ಕೂಟರ್‌ನಲ್ಲಿ ತಲುಪಿ ಮಾಲೆ ಅಪಹರಿಸಲೆತ್ನಿಸಿದ ದುಷ್ಕರ್ಮಿಯನ್ನು ಮೆಟ್ಟಿ ಬೀಳಿಸಿದ ಯುವತಿ; ಪರಾರಿಯಾದ ವ್ಯಕ್ತಿಗಾಗಿ ಶೋಧ
ಕುಂಬಳೆ: ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಮಾಲೆಯನ್ನು ಅಪಹರಿಸಲು ಯತ್ನ ನಡೆದಿದ್ದು ಈ ವೇಳೆ ದುಷ್ಕರ್ಮಿಯನ್ನು ಯುವತಿ ಬಲಪ್ರಯೋಗಿಸಿ ಎದುರಿಸಿದ ಘಟನೆ ನಡೆದಿದೆ. ಬೊಬ್ಬೆ ಕೇಳಿ ಜನರು ಸ್ಥಳಕ್ಕೆ ತಲುಪುವಷ್ಟರಲ್ಲಿ ದುಷ್ಕರ್ಮಿ ಸ್ಕೂಟರ್ ಸಹಿತ ಪರಾರಿಯಾಗಿ ದ್ದಾನೆ.
ನಿನ್ನೆ ಸಂಜೆ ಪೈವಳಿಕೆ ಕುಡಾಲುಮೇರ್ಕಳದಲ್ಲಿ ಈ ಘಟನೆ ನಡೆದಿದೆ. ವಸಂತಿ ಎಂಬವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ತಲುಪಿದ ದುಷ್ಕರ್ಮಿ ಸಮೀಪದಲ್ಲಿ ನಿಲ್ಲಿಸಿ ದಾರಿ ಕೇಳಿದ್ದಾನೆನ್ನಲಾಗಿದೆ. ಈ ವೇಳೆ ವಸಂತಿ ದಾರಿ ಸೂಚಿಸುತ್ತಿದ್ದಂತೆ ದುಷ್ಕರ್ಮಿ ಆಕೆಯ ಕುತ್ತಿಗೆಯಲ್ಲಿದ್ದ ಮಾಲೆಯನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ವಸಂತಿ ಆತನ ಮೇಲೆ ತುಳಿದು ಬೀಳಿಸಿದ್ದಾರೆ. ಇನ್ನು ಇಲ್ಲಿದ್ದರೆ ಅಪಾಯ ಖಚಿತವೆಂದು ತಿಳಿದುಕೊಂಡ ದುಷ್ಕರ್ಮಿ ತಕ್ಷಣ ಸ್ಕೂಟರ್‌ನಲ್ಲೇ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳೀಯರು ಹಾಗೂ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಹುಡುಕಾಟ ನಡೆಸಿದರೂ ದುಷ್ಕರ್ಮಿ ಯನ್ನು ಪತ್ತೆಹಚ್ಚಲಾಗಲಿಲ್ಲ. ಪೊಲೀಸರು ಈ ಪ್ರದೇಶದ ಸಿಸಿ ಕ್ಯಾಮರಾಗಳ ದೃಶ್ಯ ಗಳನ್ನು ಪರಿಶೀಲಿಸುತ್ತಿದ್ದಾರೆ.