ಸ್ಕೂಟರ್ನಲ್ಲಿ ಸಂಚರಿಸಿ ಮಹಿಳೆಯರ ಚಿನ್ನದ ಸರ ಎಗರಿಸಿದ ನೆಲ್ಲಿಕಟ್ಟೆ ನಿವಾಸಿ ಸೆರೆ; ಆರೋಪಿಯ ಪತ್ತೆಗೆ ಸಹಾಯಕವಾದುದು ಬಸ್ಗಳ ಸಿಸಿ ಕ್ಯಾಮರಾ ದೃಶ್ಯ
ಬದಿಯಡ್ಕ: ಪಾದಚಾರಿಗಳಾದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿ ಪರಾರಿಯಾದ ಪ್ರಕ ರಣದಲ್ಲಿ ಆರೋಪಿಯೋರ್ವ ನನ್ನು ಹೊಸದುರ್ಗ ಪೊಲೀಸರು ಬದಿಯಡ್ಕ ಪೊಲೀಸರ ಸಹಾಯ ದೊಂದಿಗೆ ಅತೀ ಸಾಹಸದಿಂದ ಸೆರೆಹಿಡಿದಿದ್ದಾರೆ.
ನೆಲ್ಲಿಕಟ್ಟೆ ಬಳಿಯ ಚೆನ್ನಡ್ಕ ಚಲ್ಕ ಎಂಬಲ್ಲಿನ ಇಬ್ರಾಹಿಂ ಖಲೀಲ್ ಸಿ.ಎಂ (43) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡ್ನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಈತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇತ್ತೀಚೆಗೆ ಪಡನ್ನಕ್ಕಾಡ್ನಲ್ಲಿ ಮಹಿಳೆಯ ಕುತ್ತಿಗೆಯಿಂದ ಇಬ್ರಾಹಿಂ ಖಲೀಲ್ ಚಿನ್ನದ ಸರ ಎಗರಿಸಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆಯಲ್ಲಿ ಸರ ಎಗರಿಸಿರುವುದು ಚೆನ್ನಡ್ಕ ಚಲ್ಕದ ಇಬ್ರಾಹಿಂ ಖಲೀಲ್ ಆಗಿದ್ದಾನೆಂದು ತಿಳಿದುಬಂದಿದೆ. ಇದರಂತೆ ಬದಿಯಡ್ಕ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಂಧನದೊಂದಿಗೆ ಎಂಟು ಕಡೆಗಳಲ್ಲಿ ನಡೆದ ಸರ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಈತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸುಗಳನ್ನು ದಾಖಲಿಸಲಾಗಿದೆ.
2022 ನವಂಬರ್ 11ರಂದು ನೀರ್ಚಾಲ್ನಲ್ಲಿ ಬಸ್ ಇಳಿದು ನಡೆದುಹೋಗುತ್ತಿದ್ದ ಮಹಿಳೆಯ ಚಿನ್ನಾಭರಣ, 2023 ಫೆಬ್ರವರಿ 1ರಂದು ಪೆರ್ಲದಲ್ಲಿ, ಎಪ್ರಿಲ್ 20ರಂದು ವಿದ್ಯಾನಗರ, ನವಂಬರ್ 30ರಂದು ನೆಕ್ರಾಜೆ ಅರ್ತಿಪಳ್ಳ, 2024 ಫೆಬ್ರವರಿ 16ರಂದು ನೀರ್ಚಾಲು, ಮಾರ್ಚ್ 16ರಂದು ತೆಕ್ಕಿಲ್, 18ರಂದು ಪೊಯಿನಾಚಿ, ಜೂನ್ 1ರಂದು ಪೆರ್ಲ ಎಂಬಿಡೆಗಳಲ್ಲಿ ಮಹಿಳೆಯರ ಕುತ್ತಿಗೆ ಯಿಂದ ಚಿನ್ನದ ಸರ ಎಗರಿಸಿರುವುದು ಇಬ್ರಾಹಿಂ ಖಲೀಲ್ ಆಗಿದ್ದಾನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೊನೆಯದಾಗಿ ಈತ ಜೂನ್ 15ರಂದು ಪಡನ್ನಕ್ಕಾಡ್ನಲ್ಲಿ ಅಜಾನೂರು ಇಟ್ಟಮ್ಮಲ್ನ ಸರೋಜಿನಿ ಅಮ್ಮ (65) ಎಂಬವರ ಕುತ್ತಿಗೆಯಿಂದ ಈತ ಸರ ಎಗರಿಸಿದ್ದನು. ಇವರು ಪಡನ್ನಕ್ಕಾಡ್ನ ಆಸ್ಪತ್ರೆಗೆ ತೆರಳಿ ಮರಳುತ್ತಿದ್ದಾಗ ಸ್ಕೂಟರ್ನಲ್ಲಿ ತಲುಪಿದ ಆರೋಪಿ ಮಾಲೆ ಎಗರಿಸಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಸರ ಎಗರಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಮೂಲಕ ಸ್ಕೂಟರ್ನಲ್ಲಿ ಪರಾರಿಯಾದ ಬಗ್ಗೆ ಪೊಲೀಸರಿಗೆ ಸೂಚನೆ ಲಭಿಸಿತ್ತು. ಇದರಂತೆ ಆ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಖಾಸಗಿ ಬಸ್ಗಳ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿ ಮಳೆಕೋಟ್ ಹಾಗೂ ಹೆಲ್ಮೆಟ್ ಧರಿಸಿ ಬಸ್ನ ಮುಂದೆ ಸಂಚರಿಸುತ್ತಿರುವುದು ಕಂಡುಬಂದಿದೆ. ಹೀಗೆ ಹಲವು ಬಸ್ಗಳ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿ ಸಂಚರಿಸಿದ ದಾರಿಯನ್ನು ಸರಿಯಾಗಿ ಗುರುತಿಸಿಕೊಂಡ ಪೊಲೀಸರು ಆತನನ್ನು ಹಿಂಬಾಲಿಸಿದ್ದರು. ಕೊನೆಯದಾಗಿ ಚೆರ್ಕಳದಿಂದ ಬದಿಯಡ್ಕ ಭಾಗಕ್ಕೆ ತೆರಳುವ ಬಸ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇಬ್ರಾಹಿಂ ಖಲೀಲ್ ಚರ್ಲಡ್ಕದತ್ತ ಸಂಚರಿಸುತ್ತಿರುವುದು ಕಂಡುಬಂದಿದೆ. ಇದರಂತೆ ಮುಂದುವರಿದಾಗ ಆರೋಪಿ ಚರ್ಲಡ್ಕದ ಅಂಗಡಿಯೊಂದಕ್ಕೆ ತಲುಪಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲಿ ಆರೋಪಿ ಹೆಲ್ಮೆಟ್ ಹಾಗೂ ಕೋಟು ಕಳಚಿಟ್ಟು ಸಾಮಗ್ರಿ ಖರೀದಿಸುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಆತನ ಮುಖದ ಗುರುತು ಹಚ್ಚಲಾಯಿತು. ಅಲ್ಲಿಂದ ಆತನ ಹೆಸರು ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ಸೈಬರ್ ಸೆಲ್ನ ಸಹಾಯದೊಂದಿಗೆ ಮನೆಯನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬದಿಯಡ್ಕ ಪೊಲೀಸರ ಸಹಾಯದೊಂದಿಗೆ ಮೊನ್ನೆ ರಾತ್ರಿ 12 ಗಂಟೆಗೆ ಮನೆಗೆ ದಾಳಿ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಪಿ. ಆಜಾದ್ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಶೈಜು ವೆಳ್ಳೂರು, ಅಜಿತ್ ಕಕ್ಕರ, ಅನೀಶ್ ನಾಪಚ್ಚಾಲ್ ಎಂಬಿವರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಆರೋಪಿ ಯನ್ನು ಬಂಧಿಸಲು ಸಾಧ್ಯವಾಗಿದೆ. ಆರೋಪಿ ಸಂಚರಿಸಿದ ಸ್ಕೂಟರ್ ಕಸ್ಟಡಿಗೆ ತೆರೆಯಲಾಗಿದೆ. ಅದರ ನಂಬ್ರ ನಕಲಿಯಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.