ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಮಾರ್ಗಸೂಚಿ ಮತ್ತು ತರಬೇತಿ ಓಣಂ ಬಳಿಕ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಗಡಿ ಪುನರ್‌ನಿರ್ಣಯಿಸಲು ಅವುಗಳ ಕಾರ್ಯದರ್ಶಿಗಳಿಗಿರುವ   ಅಗತ್ಯದ ಮಾರ್ಗಸೂಚಿಯನ್ನು ಓಣಂ ಹಬ್ಬದ ಬಳಿಕ ಹೊರಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಗ್ರಾಮ- ಬ್ಲೋಕ್ ಮತ್ತು ಜಿಲ್ಲಾ ಪಂಚಾಯತ್‌ಗಳ ವಾರ್ಡ್‌ಗಳನ್ನು ವಿಭಜಿಸಿ  ಹೊಸ ವಾರ್ಡ್‌ಗಳನ್ನು ರೂಪೀಕರಿಸಿದ ಅಧಿಸೂಚನೆಯನ್ನು ಸರಕಾರ ಈಗಾಗಲೇ ಹೊರಡಿಸಿದೆ. ಇನ್ನು ನಗರಸಭೆಗಳು ಮತ್ತು ಕಾರ್ಪರೇಷನ್‌ಗಳ ವಾರ್ಡ್‌ಗಳ ವಿಭಜನೆ ಕ್ರಮ ಇನ್ನಷ್ಟೇ ನಡೆಸಲು ಬಾಕಿ ಇದೆ. ಆ ಕುರಿತಾದ ಅಧಿಕೃತ ಸೂಚನೆ ಸರಕಾರ ಶೀಘ್ರ ಹೊರಡಿಸಲಿದೆ. ಆ ಬಳಿಕವಷ್ಟೇ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಗಡಿ ನಿರ್ಣಯ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕಾಗಿರುವ ಮಾರ್ಗಸೂಚಿಯನ್ನು ಸರಕಾರ ಹೊರಡಿಸಬೇಕಾಗಿದೆ. ಮಾತ್ರವಲ್ಲ ಗಡಿ ನಿರ್ಣಯಿಸುವ ಕುರಿತಾದ ತರಬೇತಿ ಸಂಬಂಧಪಟ್ಟ ಸಿಬ್ಬಂದಿಗಳಿಗೆ ನೀಡಬೇಕಾಗಿದೆ. ಈ ಪ್ರಕ್ರಿಯೆಗಳು  ಪೂರ್ಣಗೊಂಡ ಬಳಿಕವಷ್ಟೇ ವಾರ್ಡ್‌ಗಳ ಗಡಿ ನಿರ್ಣಯ ಕ್ರಮ ಆರಂಭಗೊಳ್ಳಲಿದೆ. ಗಡಿ ನಿರ್ಣಯಕ್ಕಾಗಿ ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್‌ರ ಅಧ್ಯಕ್ಷತೆಯಲ್ಲಿ ಡಿಲಿಮಿಟೇಷನ್ ಸಮಿತಿಗೆ ರೂಪು ನೀಡಲಾಗಿದ್ದು, ಓಣಂ ಹಬ್ಬದ ಬಳಿಕ ಈ ಸಮಿತಿ ಸಭೆ ಸೇರಿ ಅನುಸರಿಸಬೇಕಾಗಿರುವ ಮಾರ್ಗಸೂಚಿಗಳಿಗೆ ರೂಪು ನೀಡಲಿದೆ. ಅದಾದ ಬಳಿಕ ಸಂಬಂಧಪಟ್ಟ ಸಿಬ್ಬಂದಿಗಳಿಗೆ ಆಯಾ ಜಿಲ್ಲಾ ಮಟ್ಟದಲ್ಲಿ ವಾರ್ಡ್‌ಗಳ ಗಡಿನಿರ್ಣಯ ಕ್ರಮಗಳ ಕುರಿತು ತರಬೇತಿ ನೀಡಲಾಗುವುದು. ನಂತರವಷ್ಟೇ  ವಾರ್ಡ್‌ಗಳ ಗಡಿ ನಿರ್ಣಯ ಕ್ರಮ ಆರಂಭಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page