ಸ್ಪೆಷಲ್ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ದಾಳಿ: ವಿವಿಧೆಡೆಗಳಿಂದ ದಂಡ ವಸೂಲಿ
ಕಾಸರಗೋಡು: ತ್ಯಾಜ್ಯ ಸಂಸ್ಕರಣೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚುವುದಕ್ಕಾಗಿ ಸ್ಥಳೀಯಾಡಳಿತ ಇಲಾಖೆಯ ಸ್ಪೆಷಲ್ ಎನ್ಫೋರ್ಸ್ ಮೆಂಟ್ ಸ್ಕ್ವಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಹಲವು ಕಡೆಗಳಿಂದ ದಂಡ ವಸೂಲು ಮಾಡಿದೆ. ಅನಂತಪುರ ಕೈಗಾರಿಕಾ ಪಾರ್ಕ್ನ ಸಂಸ್ಥೆಗಳು, ಪನತ್ತಡಿಯ ಕ್ವಾರ್ಟರ್ಸ್, ಮುಳಿಯಾರಿನ ಅಪಾರ್ಟ್ಮೆಂಟ್ಗಳಿಂದ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ 5000 ರೂ.ನಂತೆ ದಂಡ ಹೇರಲಾಗಿದೆ. ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟ ಹಿನ್ನೆಲೆಯಲ್ಲಿ ಕಂಪೆನಿ ಮಾಲಕರಿಂದ 7500 ರೂ.ನಂತೆ ದಂಡ ವಸೂಲಿ ಮಾಡಲಾಗಿದೆ. ಕಾಸರಗೋಡು ಕರಂದಕ್ಕಾಡಿನಲ್ಲಿರುವ ಕ್ವಾರ್ಟರ್ಸ್ ಮಾಲಕನಿಗೆ 5000 ರೂ. ದಂಡ, ಹಾಗೂ ಮಲಿನ ಜಲ ಬಹಿರಂಗವಾಗಿ ಹರಿಯಬಿಟ್ಟಿರುವುದಕ್ಕೆ 10,000 ರೂ. ದಂಡ ಹೇರಲಾಗಿದೆ. ಉಪಯೋಗಶೂನ್ಯ ಸ್ಥಳಕ್ಕೆ ಮಲಿನಜಲ ಹರಿಯಬಿಟ್ಟ ನೀಲೇಶ್ವರ ನಗರಸಭೆಯ ರೆಸ್ಟೋರೆಂಟ್ ಮಾಲಕನಿಗೂ, ಚೆಂಗಳ ಬಿಸಿ ರೋಡ್ನ ಅಪಾರ್ಟ್ಮೆಂಟ್ ಮಾಲಕನಿಗೂ 10,000 ರೂ.ನಂತೆ ದಂಡ ಹೇರಲಾಗಿದೆ. ಮುಳ್ಳೇರಿಯ ಬೋವಿಕ್ಕಾನ ರಸ್ತೆಯಲ್ಲಿರುವ ಎರಡು ಕ್ವಾರ್ಟರ್ಸ್ಗಳಿಂದ ಹಾಗೂ ಬಾವಿಕ್ಕೆರೆ ಸೂಪರ್ ಮಾರ್ಕೆಟ್ನಿಂದ, ಚೀಮೇನಿ ಸ್ಪೆಷಾಲಿಟಿ ಕ್ಲಿನಿಕ್ನಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಪೇಕ್ಷಿಸಿರುವುದಕ್ಕೆ 3000 ರೂ.ನಂತೆ ದಂಡ ಹೇರಲಾಯಿತು. ವರ್ಕಾಡಿಯ ಅಪಾರ್ಟ್ಮೆಂಟ್ ಮಾಲಕನಿಗೆ 5000 ರೂ, ಅಂಗಡಿ ಪರಿಸರವನ್ನು ಶುಚಿಯಾಗಿರಿಸದಿರುವುದಕ್ಕೆ ಸ್ಟೋರ್ ಮಾಲಕನಿಗೆ 2000 ರೂ.ನಂತೆ ದಂಡ ವಿಧಿಸಲಾಯಿತು.