ಸ್ಮಾರ್ಟ್ ಆಗಲು ಇನ್ನೆಷ್ಟು ಕಾಲ: ಅರ್ಧದಲ್ಲೇ ಮೊಟಕುಗೊಂಡ ಅಡ್ಕ ಅಂಗನವಾಡಿ ಕಟ್ಟಡ ನಿರ್ಮಾಣ: ಗುತ್ತಿಗೆದಾರನ ನಿರಾಸಕ್ತಿ
ಮುಳ್ಳೇರಿಯ: ಕಾರಡ್ಕ ಪಂಚಾಯತ್ನ ಅಂಗನವಾಡಿ ಕಟ್ಟಡವೊಂದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿದೆ. ಮುಂಡೋಳು ಜಂಕ್ಷನ್ ಅಡ್ಕದಲ್ಲಿನ ಅಂಗನವಾಡಿಗಾಗಿ ಹೊಸ ಕಟ್ಟಡ ನಿರ್ಮಿಸಲು ಮೂರು ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಅರ್ಧ ಗೋಡೆ ಕಟ್ಟಿದ ಬಳಿಕ ಕಟ್ಟಡದ ಕಾಮಗಾರಿ ಮೊಟಕಾಗಿದೆ.
ಜಿಲ್ಲಾ ಪಂಚಾಯತ್ನ ಫಂಡ್ ಉಪಯೋಗಿಸಿ ಸ್ಮಾರ್ಟ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಾಂದಿ ಹಾಡಲಾಗಿತ್ತು. ಸುಮಾರು 30 ಲಕ್ಷ ರೂ.ಗೂ ಅಧಿಕ ಮೊತ್ತದ ಯೋಜನೆ ಇದಾಗಿದೆ. ಮೂರು ವರ್ಷದ ಹಿಂದೆ ಆನ್ಲೈನ್ ಮೂಲಕ ಟೆಂಡರ್ ವಹಿಸಿಕೊಂಡ ವ್ಯಕ್ತಿ ನಿರ್ಮಾಣ ಆರಂಭಿಸಿ ಅರ್ಧ ಕೆಲಸವಾದ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಟೆಂಡರ್ ವಹಿಸಿಕೊಂಡ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಶೀಘ್ರವೇ ನಿರ್ಮಾಣ ಪೂರ್ತಿಗೊಳಿಸುವುದಾಗಿಯೂ ನಾನು ಊರಲ್ಲಿಲ್ಲದ ಕಾರಣ ಕಾಮಗಾರಿ ಮೊಟಕಾಗಿದೆ ಎಂದೂ ಹೇಳುತ್ತಿರುವುದಾಗಿ ಪಂ. ಅಧಿಕಾರಿಗಳು ತಿಳಿಸುತ್ತಾರೆ. ಇದೇ ರೀತಿ ಮಲ್ಲಾವರದಲ್ಲಿ ಇನ್ನೊಂದು ಅಂಗನವಾಡಿ ನಿರ್ಮಾಣದ ಹೊಣೆ ಇದೆ ಗುತ್ತಿಗೆದಾರ ವಹಿಸಿಕೊಂಡಿದ್ದು, ಅಲ್ಲೂ ಕಾಮಗಾರಿ ಅರ್ಧದಲ್ಲಿದೆ.
ಟೆಂಡರ್ ವಹಿಸಿಕೊಂಡು ಆ ಬಳಿಕ ಕಾಮಗಾರಿ ಪೂರ್ತಿಗೊಳಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಯಲ್ಲಿ ಸೇರಿಸುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ೫೦ ವರ್ಷದ ಹಿಂದೆ ಆರಂಭಗೊಂಡ ಅಂಗನವಾಡಿ ಇದಾಗಿದ್ದು, ಪ್ರಸ್ತುತ ಹಳೆಯ ಶೋಚನೀಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಪಂಚಾಯತ್ನಲ್ಲಿ ಒಟ್ಟು 5 ಅಂಗನವಾಡಿಗಳನ್ನು ಸ್ಮಾರ್ಟ್ ಆಗಿಸಲು ಜಿಲ್ಲಾ ಪಂಚಾಯತ್ ಯೋಜನೆ ಹಾಕಿದ್ದು, ಅದರಲ್ಲಿ ಮೂರು ಅಂಗನವಾಡಿಗಳು ಸ್ಮಾರ್ಟ್ ಆಗಿ ಕಾರ್ಯಾಚರಿಸುತ್ತಿದೆ. ಉಳಿದ ಎರಡೂ ಇನ್ನು ಬಾಲ್ಯಾವಸ್ಥೆಯಲ್ಲೇ ಇದೆ.
ಅಡ್ಕದ ಅಂಗನವಾಡಿಗೆ ಈ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ತಲುಪುತ್ತಿದ್ದರೆ ಈಗ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಸೌಕರ್ಯದಿಂದ ಉಸಿರುಗಟ್ಟುವ, ಸರಿಯಾಗಿ ಆಟವಾಡಲು ಸ್ಥಳವಿಲ್ಲದ ಈ ಅಂಗನವಾಡಿಗೆ 5 ಸೆಂಟ್ಸ್ ಸ್ಥಳ ಸ್ವಂತವಾಗಿದೆ. ಆ ಸ್ಥಳವನ್ನು ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲು ಬಹಳ ಪ್ರಯತ್ನ ನಡೆಸಿರುವುದಾಗಿ ಈ ಹಿಂದೆ ಕಾರಡ್ಕ ಪಂ. ಸದಸ್ಯರಾಗಿದ್ದ ಬಾಲಕೃಷ್ಣನ್ ಅಂಬೇಮೂಲೆ ತಿಳಿಸುತ್ತಾರೆ. ಸತತ ಮೂರು ವರ್ಷಗಳಿಂದ ನಡೆಸಿದ ಹೋರಾಟದಿಂದಾಗಿ ಅಂಗನವಾಡಿಗೆ ಸ್ಥಳ ಲಭಿಸಿದ್ದು, ಅಲ್ಲಿ ಹೊಸ ಕಟ್ಟಡ ನಿರ್ಮಿಸಲು ಆರಂಭಿಸಲಾಗಿತ್ತು. ಆದರೆ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯ ನಿರಾಸಕ್ತಿಯಿಂದ ಈಗ ಕಟ್ಟಡ ಅರ್ಧದಲ್ಲೇ ಉಳಿದಿದೆ. ಇಲ್ಲದಿದ್ದರೆ ಈಗ ಇಲ್ಲಿನ ಮಕ್ಕಳಿಗೆ ಸೌಕರ್ಯಪ್ರದ ಅಂಗನವಾಡಿಯಲ್ಲಿ ಕಳೆಯಲು ಸಾಧ್ಯವಾಗುತ್ತಿತ್ತು. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಂಗನವಾಡಿ ಪೂರ್ತಿ ನಿರ್ಮಿಸಿ ‘ಸ್ಮಾರ್ಟ್’ಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಾರೆ.