ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕೆ ನಂಬ್ಯಾರ್ ನಿಧನ
ಕಾಸರಗೋಡು: ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಭಾರತೀಯ ಸೇನಾ ಪಡೆಯ ನಿವೃತ್ತ ಸೇನಾಧಿಕಾರಿ ಕಾಸರಗೋಡು ಕೇಳುಗುಡ್ಡೆ ಅಯ್ಯಪ್ಪ ನಗರ ಹರಿಶ್ರೀ ನಿವಾಸದ ಕ್ಯಾಪ್ಟನ್ ಕೆ.ಎಂ.ಕೆ ನಂಬ್ಯಾರ್ (ಕೆ.ಎಂ. ಕುಂಞಿಕಣ್ಣನ್ ನಂಬ್ಯಾರ್ 87) ನಿನ್ನೆ ನಿಧನಹೊಂದಿದರು.
ಗೋವಾ ವಿಮೋಚನೆ ಹೋರಾಟ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕೆ.ಎಂ.ಕೆ ನಂಬ್ಯಾರ್ ಆ ಹೋರಾಟದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು. ಗೋವಾ ರಾಜ್ಯ ಸ್ವತಂತ್ರಗೊಂಡು ಭ ಭಾರತದ ಅವಿಭಾಜ್ಯ ಅಂಗವಾಗಿ ಸೇರ್ಪಡೆಗೊಂಡ ಬಳಿಕ ನಂಬ್ಯಾರ್ ಭಾರತೀಯ ಸೇನಾ ಪಡೆಗೆ ಸೇರ್ಪಡೆಗೊಂಡ ಓರ್ವ ಯೋಧನಾಗಿ ವರ್ಷಗಳ ತನಕ ಸೇವೆ ಸಲ್ಲಿಸಿದ್ದರು. 1986ರಲ್ಲಿ ಅವರಿಗೆ ಗೌರವಾರ್ಥವಾಗಿ ಕ್ಯಾಪ್ಟನ್ ಸ್ಥಾನಮಾನ ನೀಡಿ ಸನ್ಮಾನಿಸಲಾಯಿತು. ನಂತರ ಭಾರತೀಯ ಸೇನೆಯಿಂದ ನಿವೃತ್ತರಾದ ಅವರು ಮಧ್ಯವಿರೋಧಿ ಸಮಿತಿ, ಕಾನ್‌ಫೆಡ್, ಪೀಪಲ್ಸ್ ಫಾರಂ ನಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.
2013ರಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆಯಂದು ಕ್ಯಾಪ್ಟನ್ ನಂಬ್ಯಾರ್‌ರನ್ನು ದೆಹಲಿಯ ರಾಷ್ಟ್ರ ಪತಿ ಭವನದಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸನ್ಮಾನಿಸಿ ಗೌರವಿಸಿದ್ದರು.
ಅಸೌಖ್ಯ ನಿಮಿತ್ತ ಕ್ಯಾಪ್ಟನ್ ನಂಬ್ಯಾರ್‌ರನ್ನು ನಿನ್ನೆ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಮೃತರು ಕೆ.ಎಂ. ವಿಜಯಲಕ್ಷ್ಮಿ, ಮಕ್ಕಳಾದ ಕೆ.ಎಂ. ಹರಿದಾಸ್, ಕೆ.ಎಂ. ಶಿವದಾಸ್, ಕೆ.ಎಂ. ವಿಶ್ವದಾಸ್, ಸುಮತಿ, ಸುಚಿತ್ರ, ಅಳಿಯಂದಿರು ಮತ್ತು ಸೊಸೆಯಂದಿರಾದ ಕೆ. ಕರುಣಾಕರನ್ (ನಿವೃತ್ತ ಅಬಕಾರಿ ಉಪಆಯುಕ್ತ), ರಾಜನ್ ಕೆ. ನಂಬ್ಯಾರ್, ಕೆ.ಪಿ. ಸುಜಾತ, ಗೀತ, ಬಿಂದುಜಾ, ಸಹೋದರ-ಸಹೋದರಿಯರಾದ ಕೆ.ಎಂ. ಗೋವಿಂದನ್ ನಂಬ್ಯಾರ್ (ನಿವೃತ್ತ ಯೋಧ), ಕೆಎಂ. ಸರಸ್ವತಿ, ಕೆ.ಎಂ. ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರಿ ಕೆ.ಎಂ. ಕಾರ್ತ್ಯಾಯಿನಿ ಈ ಹಿಂದೆ ನಿಧನಹೊಂದಿದ್ದಾರೆ.