ಹತ್ಯೆ ಬೆದರಿಕೆ: ಪ್ರಧಾನಿ ಮೋದಿಗೆ ಇನ್ನಷ್ಟು ಬಿಗಿ ಭದ್ರತೆ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಚುನಾವಣಾ ಪ್ರಚಾರದ ವೇಳೆ ಹತ್ಯೆಗೈಯ್ಯಲಾಗುವುದೆಂಬ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿ ಬಿಗಿಗೊಳಿಸಲಾಗಿದೆ.

ಪ್ರಧಾನಿಯವರನ್ನು ಚುನಾವಣಾ ಪ್ರಚಾರದ ವೇಳೆ ಹತ್ಯೆಗೈಯ್ಯಲಾಗುವುದೆಂಬ ಫೋನ್ ಬೆದರಿಕೆ ಸಂದೇಶ ಚೆನ್ನೈಯಲ್ಲಿರುವ ಎನ್‌ಐಎ ಕಚೇರಿಗೆ ನಿನ್ನೆ ಬಂದಿದೆ. ಕರೆ ನೀಡಿದಾಕ್ಷಣ ಅದನ್ನು   ಕಟ್ ಮಾಡಲಾಗಿತ್ತು. ಹಿಂದಿ ಭಾಷೆಯಲ್ಲಿ ಈ ಬೆದರಿಕೆ ಬಂದಿತ್ತು. ಈ ಫೋನ್ ಸಂದೇಶವನ್ನು ಎನ್‌ಐಎ ಬಳಿಕ ಚೆನ್ನೈ ಸೈಬರ್ ಕ್ರೈಮ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಿದೆ. ಅದರಂತೆ ಸೈಬರ್ ಪೊಲೀಸರು ಮಾತ್ರವಲ್ಲ, ಕೇಂದ್ರ ಗುಪ್ತಚರ ವಿಭಾಗವಾದ ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ (ಐ.ಒ) ಕೂಡಾ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಬೆದರಿಕೆ ಫೋನ್ ಕರೆ ಮಧ್ಯ ಪ್ರದೇಶದಿಂದ ಬಂದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಖಾಲಿಸ್ಥಾನಿ ಉಗ್ರರ ಬೆದರಿಕೆ ನೆಲೆಗೊಂಡಿರುವಂತೆಯೇ ಪಂಜಾಬಿನಲ್ಲಿ ಪ್ರಧಾನಿಯವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಪಂಜಾಬ್ ಪಾಟ್ಯಾಲದಲ್ಲಿ ನಿನ್ನೆ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ಭಾಗವಹಿಸಿ ಮಾತನಾಡಿದ್ದರು. ಇಂದು ಅವರು ಪಂಜಾಬ್‌ನ ಗರುದಾಸ್‌ಪುರು ಮತ್ತು ಜಲಂಧರ್‌ನಲ್ಲಿ ನಡೆಯುವ ಎನ್‌ಡಿಎ ಬೃಹತ್ ಚುನಾವಣಾ ಘಟಕಗಳಲ್ಲೂ ಭಾಗವಹಿಸಿ ಮಾತನಾಡಲಿದ್ದಾರೆ. ಆ ಹಿನ್ನೆಲೆಯಲ್ಲಿ ರ‍್ಯಾಲಿ ನಡೆಯುವ ಕೇಂದ್ರಗಳು ಮತ್ತು ಪ್ರಧಾನಿಯವರು ಸಾಗುವ ಎಲ್ಲಾ ರಸ್ತೆಗಳಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಪಂಜಾಬ್‌ನ ಪಾಟ್ಯಾಲದಲ್ಲಿ ಪ್ರದಾನಿ ನಿನ್ನೆ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸುವ ವೇಳೆಯಲ್ಲೇ ಅಲ್ಲಿನ ಫ್ಲೈಓವರ್‌ನಲ್ಲಿ ಖಾಲಿಸ್ಥಾನ್ ಪರ ಗೋಡೆ ಬರಹಗಳೂ ನಿನ್ನೆ ಪ್ರತ್ಯಕ್ಷಗೊಂಡಿದ್ದವು. ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಸಿಖ್ಖ್‌ಫೋರ್ ಜಸ್ಪೀಸ್‌ನ ಹೆಸರಲ್ಲಿ ಇದನ್ನು ಬರೆಯಲಾಗಿದೆ. ಮಾತ್ರವಲ್ಲ ನಿನ್ನೆ ಅಲ್ಲಿ ಕೆಲವರು ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರಧಾನಿ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸುವುದಾಗಿ ಪಂಜಾಬ್‌ನ ವಿವಿಧ ರೈತ ಸಂಘಟನೆಗಳೂ ಇನ್ನೊಂದೆಡೆ ಘೋಷಿಸಿವೆ. ಆದ್ದರಿಂದ ಪಂಜಾಬ್‌ನಲ್ಲಿ ಪ್ರಧಾನಿ ಭಾಗವಹಿಸುವ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾರೀ ಭದ್ರತಾ ವ್ಯೂಹವನ್ನೇ ಏರ್ಪಡಿಸಲಾಗಿದೆ. ಪೊಲೀಸರು, ಕೇಂದ್ರ ಭದ್ರತಾ ಪಡೆ ಮತ್ತು ಗುಪ್ತಚರ ವಿಭಾಗದವರು ಎಲ್ಲೆಡೆ ಹದ್ದಿನ ಕಣ್ಣು ಇರಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page