ಹಳಿ ಬದಲಾಗಿ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್: ತಪ್ಪಿದ ಭಾರೀ ದುರಂತ
ಹೊಸದುರ್ಗ:ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್ ರೈಲು ಹಳಿ ಬದಲಾಗಿ ಸಂಚರಿಸಿದುದು ಅಲ್ಪ ಹೊತ್ತು ಗೊಂದಲ ಹಾಗೂ ಆತಂಕಕ್ಕೆ ಕಾರಣವಾಯಿತು.
ಕಾಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ನಿನ್ನೆ ಸಂಜೆ ೬.೪೫ರ ವೇಳೆ ಈ ಘಟನೆ ನಡೆದಿದೆ. ಒಂದನೇ ಫ್ಲಾಟ್‌ಫಾಂಗೆ ತಲುಪಬೇಕಾಗಿದ್ದ ರೈಲು ಫ್ಲಾಟ್‌ಫಾಂ ಇಲ್ಲದ ಮಧ್ಯದ ಹಳಿಯಲ್ಲಿ ಸಂಚರಿಸಿತ್ತು. ಈ ಹೊತ್ತಿನಲ್ಲಿ ಅದೇ ಹಳಿಯಲ್ಲಿ ಬೇರೆ ರೈಲು ಇಲ್ಲದಿದ್ದುದರಿಂದ ಭಾರೀ ದುರಂತ ತಪ್ಪಿದೆ. ಇದೇ ರೈಲಿನಲ್ಲಿ ಪ್ರಯಾಣಿಕ ಬೇಕಾಗಿದ್ದವರು ಇದು ಬೇರೆ ರೈಲಾಗಿರಬಹುದೆಂದು ಭಾವಿಸಿದ್ದರು. ಆದರೆ ರೈಲು ಆಗಮಿಸಿದ ಬಗ್ಗೆ ಘೋಷಣೆಯಾದುದರಿಂದ ಮಾವೇಲಿ ಎಕ್ಸ್‌ಪ್ರೆಸ್ ಹಳಿ ಬದಲಾಗಿ ಸಂಚರಿಸಿದೆಯೆಂದು ಅರಿವಿಗೆ ಬಂದಿದೆ. ಫ್ಲಾಟ್‌ಫಾಂ ಇಲ್ಲದ ಹಳಿಯಲ್ಲಿ ರೈಲು ನಿಂತಿರುವುದರಿಂದ ವಯಸ್ಕರು ಹಗೂ ಪುಟ್ಟ ಮಕ್ಕಳೊಂದಿಗೆ ಬಂದ ಹೆತ್ತವರು ರೈಲಿಗೇರಲು ಭಾರೀ ಸಮಸ್ಯೆ ಎದುರಿಸಬೇಕಾಗಿ ಬಂತು. ಫ್ಲಾಟ್ ಫಾಂನಲ್ಲಿ ಬೆಳಕಿನ ಕೊರತೆಯೂ ಇದ್ದು, ಇದರಿಂದ ರಿಸರ್ವೇಶನ್ ಮಾಡಿದ ಪ್ರಯಾಣಿಕರಿಗೆ ತಮ್ಮ ಬೋಗಿಗಳನ್ನು ಪತ್ತೆಹಚ್ಚಲು ಸಮಸ್ಯೆ ಎದುರಾಯಿತು. ಇದರಿಂದ ಐದು ನಿಮಿಷ ಹೆಚ್ಚು ಹೊತ್ತು ರೈಲು ನಿಲ್ಲಿಸಿ ಎಲ್ಲಾ ಪ್ರಯಾಣಿಕರು ಹತ್ತಿದ ಬಳಿಕ ಪ್ರಯಾಣ ಮುಂದುವರಿದಿದೆ. ತಾಂತ್ರಿಕ ಅಡಚಣೆಯಿಂದಾಗಿ ರೈಲು ಹಳಿ ಬದಲಾಗಿ ಸಂಚರಿಸಿ ನಿಂತಿದೆಯೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಘಟನೆ ಬಗ್ಗೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಯಲಿದೆ. ಇತ್ತೀಚೆಗೆ ಒಡಿಸ್ಸಾದ ಬಾಲಾಸೋರ್‌ನಲ್ಲಿ ಇದೇ ರೀತಿ ರೈಲು ಹಳಿ ಬದಲಾಗಿ ಸಂಚರಿಸಿ ಭಾರೀ ದುರಂತ ಸಂಭವಿಸಿತ್ತು.