ಹಿಂದೂ ಮಹಾಸಾಗರದಲ್ಲಿ 9500 ವರ್ಷಗಳ ಪ್ರಾಚೀನ ನಗರ ಪತ್ತೆ
ನವದೆಹಲಿ: ಹಿಂದೂ ಮಹಾಸಾಗರದ ಅಡಿ ಭಾಗದಲ್ಲಿ ಸುಮಾರು 9500 ವರ್ಷಗಳ ಪ್ರಾಚೀನ ನಗರವೊಂದು ಪತ್ತೆಯಾಗಿದೆ. ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಗಳಲ್ಲಿ ಹರಪ್ಪ ಅಂದರೆ ಸಿಂಧೂ ಕಣಿವೆ ನಾಗರಿಕತೆ ಮತ್ತು ಸುಮೇರಿಯನ್ ನಾಗರಿಕತೆಯ ಹೆಸರುಗಳು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಅವುಗಳಿಗಿಂತಲೂ ಹಳೆಯದಾದ ನಾಗರಿಕತೆ ಈ ಭೂಮಿಯ ಮೇಲೆ ಅಸ್ಥಿತ್ವದಲ್ಲಿದೆ ಎಂಬುದಕ್ಕೆ ಹಿಂದೂ ಮಹಾಸಾಗರದಲ್ಲಿ ಪತ್ತೆಯಾದ ಈ ಪ್ರಾಚೀನ ನಗರ ಒಂದು ಉದಾಹರಣೆಯಾಗಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.
ವೈಜ್ಞಾನಿಕ ತಂಡದ ಅಭಿಪ್ರಾಯ ಪ್ರಕಾರ ಹಿಮಯುಗದ ಕೊನೆಯಲ್ಲಿ ಸಮುದ್ರ ಮಟ್ಟ ಏರಿಕೆಯಿಂದ ಮುಳುಗಿ ಹೋದ ಅತ್ಯಂತ ಮುಂದುವರಿದ ನಾಗರಿಕತೆಯನ್ನು ಇದು ಸೂಚಿಸುತ್ತಿದೆ. ಹರಪ್ಪ ನಾಗರಿಕತೆಯು ಈ ಸಾಗರದೊಳಗಿನ ನಾಗರಿಕತೆಯಿಂದಲೇ ವಿಕಸನಗೊಂಡಿರಬಹುದು ಎಂದು ಅವರು ಹೇಳುತ್ತಿದ್ದಾರೆ. ಕಾರ್ಬನ್ ಡೇಟಿಂಗ್ನ ಮೂಲಕ ಇದರ ಪ್ರಾಚೀನತೆಯನ್ನು ಪತ್ತೆಹಚ್ಚುವ ತೀವ್ರ ಯತ್ನ ನಡೆಸಲಾಗುತ್ತಿದೆ. ಈ ಸ್ಥಳದಿಂದ ಮಣ್ಣಿನ ಪಾತ್ರೆಗಳು, ಮಣಿಗಳು, ಪ್ರತಿಮೆಗಳು ಮತ್ತು ಮಾನವ ಅವಶೇಷಗಳಂತಹ ಅನೇಕ ವಸ್ತುಗಳು ಕಂಡು ಬಂದಿವೆ. ಇವುಗಳನ್ನೆಲ್ಲಾ ಕಾರ್ಬನ್ ಡೇಟೆಡ್ ಪರೀಕ್ಷೆಗೊಳಪಡಿಸಿದಾಗ ಈ ಕಲಾಕೃತಿಗಳು ಸುಮಾರು ೯೫೦೦ ವರ್ಷಗಳಷ್ಟು ಹಳೆಯದಾಗಿವೆ ಎಂದು ಪತ್ತೆಹಚ್ಚಲಾಗಿದೆ. ಈ ವಸ್ತು ಸಿಂಧೂ ಕಣಿವೆ ನಾಗರಿಕತೆಗಿಂತಲೂ ಹಳೆಯದಾಗಿದೆ ಎಂದು ನಂಬಲಾಗಿದೆ. ಭಾರತದ ಪಶ್ಚಿಮ ಕರಾವಳಿಯ ಸಮುದ್ರದ ಆಳದಲ್ಲಿ ಈ ಹೊಸ ನಗರ ಪತ್ತೆಯಾಗಿದೆ.