ಹಿಡಿಯಲು ಹೋದದ್ದು ಅಕ್ರಮ ಹೊಯ್ಗೆ: ಸಿಕ್ಕಿದ್ದು ಎಂಡಿಎಂಎ
ಕಾಸರಗೋಡು: ಅಕ್ರಮ ಮರಳುಗಾರಿಕೆಯನ್ನು ಪತ್ತೆಹಚ್ಚಿ ತಡೆಗಟ್ಟಲು ಹೋದ ಪೊಲೀಸರಿಗೆ ಸಿಕ್ಕಿದ್ದು ಮಾದಕ ದ್ರವ್ಯವಾದ ಎಂಡಿಎಂಎ. ತೆಕ್ಕಿಲ್ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ವಿ.ಕೆ. ಅನೀಶ್‌ರ ನೇತೃತ್ವದ ಪೊಲೀಸರ ತಂಡ ನಿನ್ನೆ ಅಲ್ಲಿಗೆ ಹೋಗುತ್ತಿದ್ದ ದಾರಿ ಮಧ್ಯೆ ತೆಕ್ಕಿಲ್ ಟಾಟಾ ಸರಕಾರಿ ಆಸ್ಪತ್ರೆ ಜಂಕ್ಷನ್ ತಲುಪಿದಾಗ ಅಲ್ಲಿ ರಸ್ತೆ ಬದಿಯಲ್ಲಿ ಏಕಾಂಗಿಯಾಗಿ ನಿಂತಿದ್ದ ಯುವಕನೋರ್ವನನ್ನು ಪೊಲೀಸರು ಕಂಡಿದ್ದಾರೆ. ಆತ ಅಕ್ರಮ ಸಾಗಾಟದಾರರಿಗೆ ಮಾಹಿತಿ ನೀಡುವ ವ್ಯಕ್ತಿಯಾಗಿರಬಹುದೆಂದು ಶಂಕಿಸಿದ ಪೊಲೀಸರು ಅಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದಾಗ ಯುವಕ ಅಲ್ಲಿಂದ ಪಲಾಯನಗೈಯ್ಯಲೆತ್ನಿಸಿದ್ದಾನೆ. ಪೊಲೀಸರು ತಕ್ಷಣ ಆತನನ್ನು ಹಿಡಿದು ತಪಾಸಣೆಗೊಳಪಡಿಸಿದಾಗ ಆತನ ಕೈಯಲ್ಲಿ 0.87 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ್ದಾರೆ. ಯುವಕ ಚೆಂಗಳ ನಾಲ್ಕನೇ ಮೈಲು ಕುನ್ನಿಲ್‌ನ ಕರೋಡಿಯ ಮುಹಮ್ಮದ್ ಅಬೂಬಕರ್ (22) ಆಗಿದ್ದು, ಆತನನ್ನು ಪೊಲೀಸರು ನಂತರ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.