ಹುಟ್ಟೂರಿಗೆ ಬಂದು ಸೇರಿದ ಜನನಾಯಕ ವಿ.ಎಸ್. ಪಾರ್ಥಿವ ಶರೀರ
ಆಲಪ್ಪುಳ: ಅಗಲಿದ ಮಾಜಿ ಮುಖ್ಯಮಂತ್ರಿ, ಸಿಪಿಎಂನ ಹಿರಿಯ ನೇತಾರ ಹಾಗೂ ಜನನಾಯಕರೂ ಆಗಿರುವ ವಿ.ಎಸ್. ಅಚ್ಯುತಾನಂದನ್‌ರ ಪಾರ್ಥಿವ ಶರೀರವನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿರುವನಂತಪು ರದಿಂದ ಮೆರವಣಿಗೆ ಮೂಲಕ ಹುಟ್ಟೂರಾದ ಆಲಪ್ಪುಳಕ್ಕೆ ಇಂದು ಬೆಳಿಗ್ಗೆ 7.30ಕ್ಕೆ ತಲುಪಿಸಲಾಯಿತು.
ಆಲಪ್ಪುಳ ಜಿಲ್ಲೆಯ ಕಾಯಂಕುಳಕ್ಕೆ ಪಾರ್ಥಿವ ಶರೀರ ತಲುಪಿದಾಗ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಜನಪ್ರವಾಹವೇ ರಸ್ತೆಯುದ್ದಕ್ಕೂ ಹರಿದುಬಂದು ಅಗಲಿದ ನಾಯಕನಿಗೆ ಮುಗಿಲುಮುಟ್ಟುವ ಘೋಷಣೆ ಮೊಳಗಿಸುತ್ತಾ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 9.30ಕ್ಕೆ ವಿ.ಎಸ್.ರ ಹುಟ್ಟೂರಾದ ಪುನ್ನಪ್ರಕ್ಕೆ ತಲುಪಿಸಲು ತೀರ್ಮಾನಿಸಲಾಗಿತ್ತಾದರೂ ಮೃತದೇಹ ಸಾಗುವ ರಸ್ತೆಯುದ್ದಕ್ಕೂ ಭಾರೀ ಜನಪ್ರವಾಹವೇ ಹರಿದು ಬರುತ್ತ್ತಿರುವ ಕಾರಣದಿಂದಾಗಿ ನಿಗದಿತ ಸಮಯಕ್ಕೆ ತಲುಪಿಸಲು ಸಾಧ್ಯವಾಗದಂತಾಯಿತು. ನಿಗದಿತ ತೀರ್ಮಾನದಂತೆ ವಿ.ಎಸ್.ರ ಮೃತದೇಹವನ್ನು ಮೊದಲು ಪುನ್ನಪ್ರ ಪರವೂರ್‌ನಲ್ಲಿರುವ ಅವರ ಮನೆಗೆ ತಲುಪಿಸಲಾಯಿತು. ನಂತರ ತಿರೂರಂಬಾಡಿಯಲ್ಲಿರುವ ಸಿಪಿಎಂ ಜಿಲ್ಲಾ ಕಚೇರಿ ಮತ್ತು ಬೀಚ್ ರಿಕ್ರಿಯೇಶನ್ ಮೈದಾನದಲ್ಲೂ ಅಂತಿಮ ದರ್ಶನಕ್ಕಿರಿಸಲಾಯಿತು. ಅಲ್ಲಿಗೂ ಜನಪ್ರವಾಹ ಹರಿದುಬಂದಿದೆ. ಇಂದು ಸಂಜೆ ಆಲಪ್ಪುಳ ಪುನ್ನಪ್ಪ ವಲಯಾರ್ ಹುತಾತ್ಮನಗರದ ದೊಡ್ಡ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುವುದು. ಇದರಲ್ಲಿ ಮುಖ್ಯಮಂತ್ರಿ, ಸಚಿವರುಗಳು, ಸಿಪಿಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಭಾಗವಹಿಸುವರು.