ಹೊಟೇಲ್ ಮಾಲಕನನ್ನು ಇರಿದು ಗಾಯಗೊಳಿಸಿದ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಹೊಟೇಲ್ ಮಾಲಕನ ಕುತ್ತಿಗೆ ಇರಿದು ಗಾಯಗೊಳಿಸಿದ  ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3) 7 ವರ್ಷ ಕಠಿಣ ಸಜೆ, 45,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪಯ್ಯನ್ನೂರು ಪೆರುಂದಟ್ಟ ಪೋರಕುನ್ನು ತವಿಡಿಶ್ಶೇರಿ ಶ್ರೀಜಿತ್ (ಶಾಜಿ) (4೦) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 1೦ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

2021 ಜನವರಿ 23ರಂದು ಚಟ್ಟಂಚಾಲ್ ಪೇಟೆಯಲ್ಲಿರುವ ಹೊಟೇಲ್ ಮಾಲಕ ಕೆ.ಎಂ. ಗೋಪಾಲನ್ ಎಂಬವರನ್ನು ಇರಿದ ನರಹತ್ಯೆಗೈಯ್ಯಲೆತ್ನಿಸಿದ ಆರೋಪದಂತೆ ಮೇಲ್ಪರಂಬ ಪೊಲೀಸರು ಆರೋಪಿ ಶ್ರೀಜಿತ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಸಾಲ ನೀಡದ ದ್ವೇಷವೇ ಇರಿತಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಕೇಸಿನಲ್ಲಿ ತಿಳಿಸಲಾಗಿದೆ. ಅಂದು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಎಂ.ಬಿ. ಪದ್ಮನಾಭನ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ನಂತರ ಎಸ್‌ಐ ವಿ. ಕುಂಞಿಕಣ್ಣನ್ ಈ ಪ್ರಕರಣದ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ  ಸರಕಾರಿ ಪ್ಲೀಡರ್ ಪಿ. ಸತೀಶನ್ ಮತ್ತು ನ್ಯಾಯವಾದಿ ಅಂಬಿಳಿ ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರು.

RELATED NEWS

You cannot copy contents of this page