ಹೊಯ್ಗೆ ಸಾಗಾಟಕ್ಕೆ ಹಿತ್ತಿಲ ಮೂಲಕ ರಸ್ತೆ: ಇಬ್ಬರ ವಿರುದ್ಧ ಕೇಸು; ಏಳು ಕಡವುಗಳ ನಾಶ
ಕುಂಬಳೆ: ಅನಧಿಕೃತವಾಗಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಹೊಯ್ಗೆ ಸಾಗಾಟ ವಿರುದ್ಧ ಪೊಲೀಸರು ಹದ್ದುಗಣ್ಣಿಟ್ಟು ಕಾರ್ಯಾಚರಣೆ ನಡೆಸಿದರೂ ನಾಮಾತ್ರವೇ ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಹೊಯ್ಗೆ ಸಾಗಾಟ ನಡೆಸಲು ಕೆಲವು ಮಂದಿ ತಮ್ಮ ಹಿತ್ತಿಲ ಮೂಲಕ ರಸ್ತೆ ನಿರ್ಮಿಸಿ ನೀಡುತ್ತಿರು ವುದು ಕೂಡಾ ಪೊಲೀಸರಿಗೆ ತಿಳಿದು ಬಂದಿದೆ. ಇದರಂತೆ ಹಿತ್ತಿಲಿನ ಮೂಲಕ ರಸ್ತೆ ನಿರ್ಮಿಸಿದವರ ವಿರುದ್ಧ ಕುಂಬಳೆ ಇನ್ಸ್‌ಪೆಕ್ಟರ್ ಕೇಸು ದಾಖಲಿಸಿಕೊಂಡಿ ದ್ದಾರೆ. ಶಿರಿಯಾ ಒಳಯಂನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಏಳು ಕಡವುಗಳನ್ನು ಜೆಸಿಬಿ ಉಪಯೋಗಿಸಿ ನಾಶಗೊಳಿಸಲಾಗಿದೆ. ಈ ಕಡವುಗಳು ಸರಕಾರಿ ಸ್ಥಳದಲ್ಲಿರುವುದರಿಂದ ಯಾರ ವಿರುದ್ಧವೂ ಕೇಸು ದಾಖಲಿಸಲಾಗಲಿಲ್ಲ. ಉಳು ವಾರು ಮಾಕೂರು ಹಾಗೂ ಹೇರೂರು ಶ್ರೀ ಮಹಾವಿಷ್ಣು ಕ್ಷೇತ್ರ ಸಮೀಪ ಸ್ವಂತ ಹಿತ್ತಿಲಿನಲ್ಲಿ ಹೊಯ್ಗೆ ಸಾಗಾಟಕ್ಕೆ ರಸ್ತೆ ನಿರ್ಮಿಸಿ ನೀಡಲಾಗಿದೆಯೆಂಬ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಸ್ಥಳದ ಮಾಲಕರ ಕುರಿತಾದ ಪೂರ್ಣ ಮಾಹಿತಿಗಳನ್ನು ಪೊಲೀಸರು ಸಂಬಂಧ ಪಟ್ಟ ಗ್ರಾಮಾಧಿಕಾರಿಗಳಲ್ಲಿ ಆಗ್ರಹ ಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಹೊಯ್ಗೆ ಸಂಗ್ರಹ ವ್ಯಾಪಕವಾಗಿ ನಡೆಯುತ್ತಿದೆಯೆಂದೂ ಈ ಬಗ್ಗೆ ಇದುವರೆಗೆ ಯಾರ ವಿರುದ್ಧವೂ ಕೇಸು ದಾಖಲಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ಸಂಬಂಧ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.