ಹೊಸಂಗಡಿ ರೈಲ್ವೇ ಗೇಟ್ ಸಮೀಪ ರಸ್ತೆ ಬದಿ ನೀರು ಕಟ್ಟಿ ನಿಂತು ಸಮಸ್ಯೆ: ಶುಚೀಕರಣಕ್ಕೆ ಒತ್ತಾಯ
ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಸಮೀಪದ ರಸ್ತೆ ಬದಿಯಲ್ಲಿ ಮಳೆಗೆ ನೀರು ಕಟ್ಟಿ ನಿಂತು ಕೆಸರುಗದ್ದೆಯಾಗಿ ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆ ಉಂಟಾಗಿದೆ. ಬಂಗ್ರ ಮಂಜೇಶ್ವರ, ಕಟ್ಟೆಬಜಾರ್ ಮೊದಲಾದ ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಹಿತ ಜನರು ಬಸ್‌ಗಾಗಿ ಕಾಯುವ ಪ್ರದೇಶವಿದಾ ಗಿದೆ. ಆಟೋರಿಕ್ಷಾ ನಿಲುಗಡೆ, ಗೂಡಂಗಡಿ ವ್ಯಾಪಾರಿಗಳು ಇಲ್ಲಿದ್ದು, ದುರ್ವಾಸನೆ ಸಹಿಸಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಪರಿಸರದಲ್ಲಿರುವ ಸರ್ವೀಸ್ ರಸ್ತೆ ಎತ್ತರಗೊಳಿಸಲಾಗಿದ್ದು, ಇದರಿಂದ ನೀರು ಕಟ್ಟಿ ನಿಲ್ಲಲು ಕಾರಣವಾಗಿದೆ. ಆದರೆ ರಸ್ತೆ ಅಭಿವೃದ್ಧಿ ವೇಳೆ ಈ ಪರಿಸರದಲ್ಲಿ ಮಣ್ಣು ಹಾಕಿ ಶುಚೀಕರಣಗೊಳಿಸದೆ ಇರುವುದರಿಂದ ಈಗ ಶೋಚನೀಯಾವಸ್ಥೆಗೆ ತಲುಪಿದೆ. ಮಾತ್ರವಲ್ಲ ದುರ್ವಾಸನೆಗೂ ಕಾರಣವಾಗುತ್ತಿದೆ. ಅಧಿಕಾರಿಗಳು ಈ ಪರಿಸರವನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.