೨೦ ಗ್ರಾಂ ಎಂ.ಡಿ.ಎಂ.ಎ ಸಹಿತ ಜಿಲ್ಲೆಯ ಇಬ್ಬರು ಮಡಿಕೇರಿಯಲ್ಲಿ ಸೆರೆ: ಕಾರು ವಶ
ಮುಳ್ಳೇರಿಯ: ಮಾರಕ ಮಾದಕವಸ್ತುವಾದ ಎಂಡಿಎಂಎ ಸಹಿತ ಜಿಲ್ಲೆಯ ಇಬ್ಬರನ್ನು ಮಡಿಕೇರಿ ಬಳಿಯ ಕುಶಾಲನಗರದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಅಂಬಲತ್ತರ ಪಾರಪ್ಪಳ್ಳಿ ನಿವಾಸಿಗಳಾದ ಅಮೀರ್ ಟಿ.ಎಂ (೨೮), ಮಹಮ್ಮದ್ ಶಬೀರ್ ಕೆ (೩೦) ಎಂಬಿವರು ಬಂಧಿತ ಆರೋಪಿಗ ಳಾಗಿದ್ದಾರೆ. ಇವರ ಕೈಯಿಂದ ೨೦ ಗ್ರಾಂ ಎಂಡಿಎಂಎ ಹಾಗೂ ಇವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಾನು ಗೇಟ್ ಜಂಕ್ಷನ್ ಸಮೀಪದಿಂದ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ. ನಿಷೇಧಿತ ಮಾದಕವಸ್ತು ಸಾಗಾಟವಾಗುತ್ತಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲ್ಲಿ ಮಡಿಕೇರಿ ಉಪವಿಭಾಗ ಡಿಎಸ್‌ಪಿ ಜಗದೀಶ್ ಎಂ, ಡಿಸಿಆರ್‌ಬಿ ಪಿ.ಐ ಐ.ಪಿ ಮೇದಪ್ಪ, ಮಡಿಕೇರಿ ನಗರ ವೃತ್ತ ಸಿಪಿಐ ಅನೂಪ್ ಮಾದಪ್ಪ, ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಎಂಬಿವರ ನೇತೃತ್ವದ ತಂಡ ನಿನ್ನೆ ಕಾರ್ಯಾಚರಣೆ ನಡೆಸಿದೆ. ಆರೋಪಿಗಳಾದ ಅಮೀರ್ ಟಿ.ಎಂ ಹಾಗೂ ಮಹಮ್ಮದ್ ಶಬೀರ್ ಸಂಚರಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಮಾದಕವಸ್ತುವನ್ನು ಆರೋಪಿಗಳು ಮಾರಾಟಗೈಯ್ಯುವ ಉದ್ದೇಶದಿಂದ ಕಾರಿನಲ್ಲಿ ಸಂಚರಿಸಲಾಗುತ್ತಿತ್ತೆಂದು ಹೇಳಲಾಗುತ್ತಿದೆ.