೫ ಕೋಟಿ ರೂ. ಭರವಸೆ ನೀಡಿ ಯುವತಿಯ ೩೮ ಲಕ್ಷ ರೂ. ಲಪಟಾವಣೆ
ಬಂದಡ್ಕ: ೫ ಕೋಟಿ ರೂಪಾಯಿ ಸಾಲ ನೀಡುವುದಾಗಿ ತಿಳಿಸಿ ಯುವತಿಯಿಂದ ೩೮ ಲಕ್ಷರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಕಾಸರಗೋಡು ಸಿಜೆಎಂ ನ್ಯಾಯಾಲಯದ ನಿರ್ದೇಶ ಪ್ರಕಾರ ಯುವತಿ ಒಳಗೊಂಡ ಮೂರು ಮಂದಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂದಡ್ಕ ಒಳಿಕ್ಕಪದಾಲ್ ಹೌಸ್‌ನ ನಸೀಮ ರಶೀದ್ (೪೧)ರ ದೂರಿನಂತೆ ಪಡ್ಪು ಪುಳಿಕ್ಕಲ್ ಹೌಸ್‌ನ ಸೋಳಿ ಜೋಸೆಫ್ (೫೨), ಮಾಣಿಮೂಲೆ ಕಾವ್ಯಾಡ್ ಹೌಸ್‌ನ ಜೋಸುಟ್ಟಿ ಮ್ಯಾಥ್ಯು (೫೫), ಕೊಲ್ಲಂ ಕುಳತ್ತುಪುಳದ ಶೀಬ (೪೬) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ೨೦೧೮ ಸೆಪ್ಟಂಬರ್ ತಿಂಗಳ ಮೊದಲ ಆದಿತ್ಯವಾರದಿಂದ ವಿವಿಧ ದಿನಗಳಲ್ಲಾಗಿ ನೇರವಾಗಿಯೂ, ಬ್ಯಾಂಕ್ ಖಾತೆ ಮೂಲಕವೂ ೩೮ ಲಕ್ಷ ರೂಪಾಯಿಯನ್ನು ಪಡೆದು ವಂಚಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ಹಣ ನೀಡಿದರೂ ಸಾಲ ಲಭಿಸದ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ತಾನು ವಂಚನೆಗೀಡಾಗಿರುವುದಾಗಿ ದೂರುದಾತೆಗೆ ತಿಳಿದುಬಂದಿದೆ.