ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬಳಿಯ ಸುಳ್ಯಮೆಯಿಂದ 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಮೈಸೂರು ತಾಲೂಕು ಕೇರಿಗಾಳಿ ಜಯಪುರ ಹೋಬಳಿ ನಿವಾಸಿ ಸಿದ್ಧೆ ಗೌಡ ಎಂ. (25) ಎಂಬಾತ ಬಂಧಿತ ವ್ಯಕ್ತಿಯಾಗಿ ದ್ದಾನೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ. ಸುಳ್ಯಮೆಯ ಮನೆಯೊಂದರ ಬಳಿ ಶೆಡ್‌ನಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಅಕ್ಟೋಬರ್ ೮ರಂದು ರಾತ್ರಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಈ ವೇಳೆ ಶೆಡ್‌ನ ಸಮೀಪ ಮಿನಿ ಲಾರಿಯೊಂದು ಪತ್ತೆಯಾಗಿದ್ದು, ಈ ವಾಹನ ಗಾಂಜಾ ಸಾಗಾಟಕ್ಕೆ ಬಳಸಿರುವುದಾಗಿ ಸಂಶಯದ ಮೇರೆಗೆ ಅದನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಈ ವಾಹನದ ಚಾಲಕ ಸಿದ್ಧೆ ಗೌಡನಾಗಿದ್ದಾನೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನಿಗಾಗಿ ತನಿಖೆಯನ್ನು ಮೈಸೂರಿಗೆ ವಿಸ್ತಾರಿಸಲಾಗಿತ್ತು. ಇದರಂತೆ ಎಸ್.ಐ. ರತೀಶ್ ಕೆ.ಜೆ., ಪೊಲೀಸ್ ಅಧಿಕಾರಿ ಚಂದ್ರಕಾಂತ್ ಎಂಬಿವರು ಮೈಸೂರಿನಿಂದ ಸಿದ್ಧೆ ಗೌಡನನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಟದ ಸೂತ್ರಧಾರನ ಕುರಿತು ಮಾಹಿತಿ ಲಭಿಸಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.







