ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬಳಿಯ ಸುಳ್ಯಮೆಯಿಂದ 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂದು ಸಂಶಯಿಸುವ ವ್ಯಕ್ತಿ ಪೊಲೀಸ್ ಬಲೆಯಲ್ಲಿದ್ದಾನೆ. ಈತನನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಅಕ್ಟೋಬರ್ ೮ರಂದು ರಾತ್ರಿ 12.30ರ ವೇಳೆ ಶೆಡ್‌ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಪತ್ತೆಯಾಗಿತ್ತು. ಶೆಡ್‌ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ಗಾಂಜಾ ತುಂಬಿಸಿಡಲಾಗಿತ್ತು. ಗಾಂಜಾ ಸಾಗಿಸಲು ಬಳಸಲಾಗುತ್ತಿದೆ ಎಂಬ ಸಂಶಯದ ಮೇರೆಗೆ ಮಿನಿ ಲಾರಿಯೊಂದನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು.







