130 ಕಿಲೋ ಶ್ರೀಗಂಧ ಕೊರಡು ಸಹಿತ ಇಬ್ಬರ ಸೆರೆ, 2 ಕಾರು ವಶ
ಕಾಸರಗೋಡು: ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 130 ಕಿಲೋ ಶ್ರೀಗಂಧದ ಕೊರಡುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಹೊಸದುರ್ಗ ಮೂನಾಮೈಲ್‌ನ ಕಳತ್ತಿಂಗಾಲ್ ನಿವಾಸಿ ಪ್ರಸಾದ್ (34) ಮತ್ತು ಆತನ ಸಹಚರ ಮೂನಾಮೈಲ್‌ನ ಶಿಬುರಾಜ್ (43) ಎಂಬಿಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮಾಲು ಸಾಗಿಸಲೆಂದು ನಿಲ್ಲಿಸಲಾಗಿದ್ದ ಎರಡು ಕಾರುಗಳನ್ನೂ ಅರಣ್ಯ ತಂಡ ವಶಕ್ಕೆ ತೆಗೆದುಕೊಂಡಿದೆ.
ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹೊಸದುರ್ಗ ಫ್ಲೈಯಿಂಗ್ ಸ್ಕ್ವಾಡ್ ರೇಂಜ್ ಫಾರೆಸ್ಟ್ ಆಫೀಸರ್ ವಿ. ರತೀಶನ್ ಮತ್ತು ಹೊಸದುರ್ಗ ರೇಂಜ್ ಅರಣ್ಯಾಧಿಕಾರಿ ಕೆ. ರಾಹುಲ್‌ರ ನೇತೃತ್ವದ ತಂಡ ಮೊನ್ನೆ ರಾತ್ರಿ ಈ ಕಾರ್ಯಾಚರಣೆ ನಡೆಸಿದೆ.
ವಶಪಡಿಸಲಾದ ಶ್ರೀಗಂಧದ ಕೊರಡುಗಳಿಗೆ 6.5 ಲಕ್ಷ ರೂ. ಬೆಲೆಯಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಾದವರ ಪೈಕಿ ಪ್ರಸಾದ್‌ನ ಮನೆಯಲ್ಲಿ ಐದು ಗೋಣಿಚೀಲಗಳಲ್ಲಾಗಿ ಶ್ರೀಗಂಧದ ಕೊರಡುಗಳನ್ನು ಬಚ್ಚಿಡಲಾಗಿತ್ತೆಂದೂ ಆತನ ಸಹಿತ ಸಹಚರ ಶಿಬುರಾಜ್‌ನನ್ನು ನಂತರ ಬಂಧಿಸಲಾಯಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.