ರೋಮಪಾದನ ಅವಿವೇಕದಿಂದಾದ ಅನಾಹುತ
ರಾಜ್ಯಭಾರ ಮಾಡುವವರು ಅವಿವೇಕದಿಂದ ವರ್ತಿಸಿದರೆ ಆ ರಾಜ್ಯವೇ ಸಮಸ್ಯೆಗೆ ಸಿಲುಕುತ್ತದೆ ಎಂಬುದಕ್ಕೆ ಹಲವಾರು ಪುರಾವೆಗಳಿವೆ. ರಾಜನಾಗಿದ್ದವ ಆಲಸಿಯಾಗಿರದೆ ನಿತ್ಯವೂ ಮಾಡಬೇಕಾದ ಕೆಲಸಗಳನ್ನು ಮಾಡಲೇ ಬೇಕು. ಇಲ್ಲದಿದ್ದರೆ ಏನಾಗು ತ್ತದೆ ಎಂಬುದಕ್ಕೆ ರಾಮಾಯಣದಲ್ಲಿ ಬರುವ ರೋಮ ಪಾದನೇ ಸಾಕ್ಷಿಯಾ ಗಿದ್ದಾನೆ. ರಾಜನ ಆಳ್ವಿಕೆಯಲ್ಲಿ ಪ್ರಜಾ ಪ್ರಭುತ್ವಕ್ಕೆ ಅಷ್ಟು ಬೆಲೆ ಇರುವುದಿಲ್ಲ. ರಾಜಕಾರಣದಲ್ಲಾದರೆ ಆಡಳಿತಾಧಿಕಾರಿ ಆಲಸಿಯಾಗಿದ್ದರೆ ಮುಂದಿನ ಚುನಾ ವಣೆಯಲ್ಲಿ ಆತನನ್ನು ಹೊರದಬ್ಬಲು ಪ್ರಜೆಗಳಿಗೆ ಅಧಿಕಾರವಿರುತ್ತದೆ. ಆದರೆ ರಾಜರ ಆಡಳಿತದಲ್ಲಿ ಅಧಿಕಾರಕ್ಕೇರಿದ ರಾಜನೇ ಕೊನೆ ತನಕ ಅಧಿಕಾರಿಯಾಗಿ ರುತ್ತಾನೆ. ಆ ಬಳಿಕ ಆತನ ಪುತ್ರ, ಸಂಬಂಧಿಕರು ಅಧಿಕಾರಕ್ಕೇರುತ್ತಾರೆ. ಯಾರೇ ಆದರೂ ಅಧಿಕಾರ ಸ್ಥಾನದಲ್ಲಿದ್ದು ನಿಷ್ಕ್ರಿಯರಾಗಿದ್ದರೆ ಅಲ್ಲಿ ಅತಿವೃಷ್ಟಿ, ಅನಾವೃಷ್ಟಿ, ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ನಿರ್ದಶನವಾಗಿ ರೋಮಪಾದನನ್ನು ತೋರಿಸಬಹುದಾಗಿದೆ.
ರೋಮಪಾದ ಸಾಮನ್ಯನಲ್ಲ. ಆದರೆ ರಾಜನಾಗಿ ಕರ್ತವ್ಯ ನಿರ್ವಹಿಸುವುದರಲ್ಲಿ ಅಲ್ಪ ಉದಾಸೀನತೆ ತೋರಿದ. ತನ್ನ ಸ್ವಂತ ಸಂತೋಷಕ್ಕೆ ಹೆಚ್ಚು ಸಮಯ ನೀಡಿದ. ಮಧುಪಾನ, ನೃತ್ಯ ಮೊದಲಾದ ಉಲ್ಲಾಸ ಕಾರ್ಯಗಳಲ್ಲಿ ಮುಳುಗಿ ವಿಲಾಸ ಜೀವನವನ್ನು ಮುನ್ನಡೆಸಿದಾಗ ಆ ರಾಜ್ಯದಲ್ಲಿನ ವಿಪ್ರರು ತಮ್ಮ ಸಂಕಷ್ಟವನ್ನು ಹೇಳಲು ರಾಜನಲ್ಲಿಗೆ ಬರುತ್ತಾರೆ. ಆದರೆ ಮದ್ಯದ ನಶೆಯಲ್ಲಿದ್ದ ರಾಜ ಬಡ ವಿಪ್ರರನ್ನು ಹೀಯಾಳಿಸಿ ಬಿಡುತ್ತಾನೆ. ಇದರಿಂದಾಗಿ ಕೋಪ ಗೊಂಡ ಆ ರಾಜ್ಯದಲ್ಲಿದ್ದ ಎಲ್ಲಾ ವಿಪ್ರರು ಆ ರಾಜ್ಯವನ್ನು ತೊರೆದು ಹೋಗುತ್ತಾರೆ. ಇದರಿಂದಾಗಿ ಆ ರಾಜ್ಯದಲ್ಲಿ ನಡೆಯ ಬೇಕಾದ ವೈದಿಕ ಕಾರ್ಯಗಳು ನಡೆಯ ದಾಯಿತು. ಪೂಜೆ, ಪುನಸ್ಕಾರಗಳೆಲ್ಲಾ ನಿಂತುಹೋಯಿತು. ದೇವಸ್ಥಾನಗಳಿಗೆ ಬೀಗ ಹಾಕಬೇಕಾಗಿ ಬಂತು. ಹೋಮ, ಹವನಗಳು ನಿಂತುಹೋಯಿತು. ಇದು ಕ್ರಮೇಣ ಆ ರಾಜ್ಯದಲ್ಲಿ ಬರ ಉಂಟಾಗಲು ಕಾರಣವಾಯಿತು. ಹೋಮ, ಹವನಗಳಿಲ್ಲದೆ ಮಳೆ ಬಾರದಾಯಿತು. ಮಳೆ ಇಲ್ಲದೆ ಬೆಳೆ ಇಲ್ಲದಾಯಿತು, ಕುಡಿಯಲು ನೀರು ಇಲ್ಲದಾಯಿತು. ಇಷ್ಟಾಗುವಾಗ ಎಚ್ಚೆತ್ತ ರೋಮಪಾದ ಇನ್ನೇನು ಮಾಡುವು ದೆಂಬ ಚಿಂತೆಯಲ್ಲಿ ದ್ದಾಗ ಮಂತ್ರಿ ರೋ ಮಪಾದನಿಗೆ ಪರಿಹಾರ ಹೇಳಿಕೊಟ್ಟ.
ಹಿಮಾಲಯದ ತಪ್ಪಲಿನಲ್ಲಿ ಋಷ್ಯಶೃಂಗ ಎಂಬ ಮುನಿ ಇದ್ದಾನೆ. ಆತನನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಹೋಮ, ಹವನಾದಿಗಳನ್ನು ಮಾಡಿಸಿದರೆ ರಾಜ್ಯದಲ್ಲಿ ಮಳೆ ಸುರಿಯುತ್ತದೆ. ಮಳೆ ಬರಿಸುವ ಶಕ್ತಿ ಆತನಿಗೆ ಮಾತ್ರವಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಅನಾವೃಷ್ಟಿ ಇನ್ನಷ್ಟು ಹೆಚ್ಚಿ ಜನರೆಲ್ಲಾ ಪ್ರಾಣ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದನು. ಅದರಂತೆ ಮುನಿಯನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲು ರೋಮಪಾದ ಸಿದ್ಧತೆ ನಡೆಸಿದನು. ಅದಕ್ಕಾಗಿ ಏನು ಮಾಡುವುದು ಎಂಬ ಬಗ್ಗೆ ಚಿಂತಿಸಿದಾಗ ಸುಲಭದಲ್ಲಿ ಆತ ನಮ್ಮ ರಾಜ್ಯಕ್ಕೆ ಬರಲಾರನು. ಆತನನ್ನು ಉಪಾಯದಿಂದ ಕರೆತರಬೇಕಾಗಿದೆ. ಅದಕ್ಕೆ ಸುಂದರಿಯರನ್ನು ಉಪಯೋಗಿಸಬೇಕೆಂದು ಮಂತ್ರಿ ಸೂಚಿಸಿದನು. ರಾಜ ಆ ರಾಜ್ಯದಲ್ಲಿರುವ ಎಲ್ಲಾ ಸುಂದರಿಯರನ್ನು ಬರಹೇಳಿದ. ಅವರಲ್ಲಿ ಅತ್ಯಂತ ಸುಂದರಿಯಾದ ಯುವತಿಯಲ್ಲಿ ಎಲ್ಲಾ ವಿಷಯವನ್ನು ತಿಳಿಸಿ ಋಷ್ಯಶೃಂಗನನ್ನು ಹೇಗಾದರೂ ವಶೀಕರಿಸಿ ನಮ್ಮ ರಾಜ್ಯಕ್ಕೆ ಕರೆತರಬೇಕು. ಅದು ನಿಮ್ಮ ಜವಾಬ್ದಾರಿ ಎಂದು ಆದೇಶ ನೀಡಿದ. ವಿಪ್ರರ ಸಮಸ್ಯೆಯನ್ನು ಪರಿಹರಿಸದೆ ಒಂದು ತಪ್ಪು ಮಾಡಿದ ರೋಮಪಾದ ಆ ತಪ್ಪನ್ನು ತಿದ್ದಲು ಇನ್ನೊಂದು ತಪ್ಪು ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದ.
ರಾಜನ ಆಜ್ಞೆಯನ್ನು ಪಾಲಿಸಲು ಸುಂದರಿಯಾದ ಯುವತಿ ಮುನಿಯ ಆಶ್ರಮದತ್ತ ತೆರಳಿದಳು. ಅಲ್ಲಿ ಮುನಿಯ ತಂದೆಯಾದ ವಿಭಾಂಡಕ ಮುನಿ ಇಲ್ಲದ ವೇಳೆ ಸುಂದರಿ ಅಲ್ಲಿಗೆ ತೆರಳಿ ಋಷ್ಯಶೃಂಗನನ್ನು ತನ್ನ ಹಾವಾಭಾವದಿಂದ ವಶೀಕರಿಸಿ ತನ್ನೊಂದಿಗೆ ರೋಮಪಾದನನ್ನು ಅರಮನೆಗೆ ಕರೆತರುತ್ತಾಳೆ. ಇದನ್ನು ತನ್ನ ದಿವ್ಯ ದೃಷ್ಟಿಯಿಂದ ತಿಳಿದ ತಂದೆ ವಿಭಾಂಡಕರು ಕೋಪ ನೆತ್ತಿಗೇರಿ ರಾಜನ ಅರಮನೆಯತ್ತ ಆಗಮಿಸುತ್ತಾರೆ. ಆದರೆ ಇದನ್ನು ಮೊದಲೇ ತಿಳಿದಿದ್ದ ರಾಜ ರೋಮಪಾದ ವಿಭಾಂಡಕರ ಕೋಪವನ್ನು ತಣಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದ. ಕೊನೆಗೆ ಅರಮನೆಗೆ ತಲುಪುವಾಗ ವಿಭಾಂಡಕರ ಕಾಲಿಗೆ ಬಿದ್ದು ರಾಜ ತನ್ನೆಲ್ಲಾ ಕಷ್ಟವನ್ನು ತೋಡಿಕೊಂಡನು. ಅಲ್ಲದೆ ತನ್ನ ದತ್ತು ಪುತ್ರಿಯಾದ ಶಾಂತಾಳನ್ನು ಋಷ್ಯಶೃಂಗರಿಗೆ ವಿವಾಹ ಮಾಡಿಕೊಡುವುದಾಗಿಯೂ ಮಾತುಕೊಟ್ಟನು. ಹೀಗೆಲ್ಲಾ ಮಾತುಕತೆ ಯಾದ ಬಳಿಕ ಆ ರಾಜ್ಯದಲ್ಲಿ ಮಳೆ ಸುರಿಯುವಂತೆ ಮಾಡಿದ ಋಷ್ಯಶೃಂಗನಿಗೆ ರೋಮಪಾದ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟನು. ಹೀಗೆ ಅರಮನೆಯಲ್ಲಿ ರಾಣಿಯಾಗಿ ಬಾಳಬೇಕಾದ ಶಾಂತಾ ಓರ್ವ ಮುನಿಯ ಪತ್ನಿಯಾಗಿ ಕಾಡಿನಲ್ಲಿ ಆಶ್ರಮದಲ್ಲಿ ಬದುಕಬೇಕಾಯಿತು.
ವಿವಾಹ ನಡೆದ ಬಳಿಕ ಒಂದಷ್ಟು ವರ್ಷ ಅವರು ಆಶ್ರಮದಲ್ಲಿ ಕಳೆದ ಬಳಿಕ ದಶರಥ ಕೈಗೊಂಡ ಪುತ್ರಕಾಮೇಷ್ಠಿ ಯಾಗಕ್ಕಾಗಿ ಋಷ್ಯಶೃಂಗ ಅಯೋಧ್ಯಗೆ ಬರಬೇಕಾಯಿತು. ಅದಾಗಿ ಹಲವು ವರ್ಷ ಕಳೆದ ನಂತರ ಋಷ್ಯಶೃಂಗರು ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಿ ದರು. ಅವರು ಕೊನೆಗೆ ತುಂಗಾ ನದಿಯ ತಟದ ಸುಂದರ ಬೆಟ್ಟ ಪ್ರದೇಶದಲ್ಲಿ ತಪಸ್ಸನ್ನಾಚರಿಸಿದರೆಂದು ತಿಳಿದುಬರುತ್ತದೆ. ಋಷ್ಯಶೃಂಗರು ತಪಸ್ಸು ಮಾಡಿದ ಸ್ಥಳವಾದ ಕಾರಣ ಇಲ್ಲಿಗೆ ಶೃಂಗೇರಿ ಎಂದು ಹೆಸರಾಯಿತೆಂದು ಹೇಳಲಾಗುತ್ತದೆ. ಮುನಿಗಳು ತಪಸ್ಸುಮಾಡಿದ ಬೆಟ್ಟದ ಬೆಸರು ಕೂಡ ಋಷ್ಯಶೃಂಗ ಗಿರಿ ಎಂದು ಕರೆಯಲ್ಪಡುತ್ತದೆ.
ಮನುಷ್ಯರು ತನ್ನ ನಡೆ ನುಡಿ ಕರ್ತವ್ಯಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಲ್ಲಿ ಸಮಸ್ಯೆಗಳು ತಲೆದೋರುತ್ತವೆ ಎಂಬುದು ರಾಮಾಯಣದ ಬಾಲಕಾಂಡದಲ್ಲಿ ಬರುವ ರೋಮಪಾದನ ಮೂಲಕ ವಾಲ್ಮೀಕಿ ಮನುಷ್ಯ ರಾಶಿಗೆ ಎಚ್ಚರಿಕೆ ನೀಡಿದ್ದಾರೆ.