14ರ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ: ತಂದೆಗೆ ರಿಮಾಂಡ್
ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸೆರೆಗೀಡಾದ ತಂದೆಗೆ ರಿಮಾಂಡ್ ವಿಧಿಸಲಾಗಿದೆ. ಕರ್ನಾಟಕದ ಕೊಡಗು ನಿವಾಸಿಯೂ, ಕಾಞಂಗಾಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ 48ರ ಹರೆಯದ ವ್ಯಕ್ತಿ ರಿಮಾಂಡ್‌ಗೊಳಗಾದ ಆರೋಪಿಯಾಗಿ ದ್ದಾನೆ. ಈತ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ಈ ಮಧ್ಯೆ ಬಾಲಕಿ ಕಿರುಕುಳಕ್ಕೊಳಗಾಗಿದ್ದಾಳೆ. ಆದರೆ ಈಕೆ ಗರ್ಭಿಣಿಯಾಗಿ ದ್ದಾಳೆಂದು ಮನೆಯವರಿಗೊ, ಶಾಲಾ ಅಧಿಕಾರಿಗಳಿಗೊ ತಿಳಿದು ಬಂದಿರಲಿಲ್ಲ. ಕೆಲವು ದಿನಗಳ ಹಿಂದೆ ಬಾಲಕಿ ವಾಸಸ್ಥಳದಲ್ಲಿ ಮಗುವಿಗೆ ಜನ್ಮ ನೀಡಿದಾಗಲೇ ತಾಯಿಗೂ ಈ ವಿಷಯ ತಿಳಿದು ಬಂದಿದೆ. ಅಪರಿಮಿತ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಶಿಶು ಕ್ಷೇಮ ಸಮಿತಿ ಮಧ್ಯಪ್ರವೇಶಿಸಿದ್ದು, ಬಳಿಕ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದರು. ಮಗುವಿನ ಪಿತೃತ್ವ ಸಾಬೀತುಪಡಿಸಲು ಡಿಎನ್‌ಎ ತಪಾಸಣೆಗಾಗಿ ಕಳುಹಿಸಲಾಗಿದೆ. ಈ ಮಧ್ಯೆ ಬಾಲಕಿ ಗರ್ಭಿಣಿಯಾಗಿರುವುದು ತಂದೆಯ ಕಿರುಕುಳದಿಂದಾಗಿದೆ ಎಂದು ತಿಳಿದುಬಂದಿದೆ. ಮಗಳು ಪೂರ್ಣ ಗರ್ಭಿಣಿಯಾಗಿದ್ದಾಳೆಂದು ತಿಳಿದ ತಂದೆ ಒಂದು ತಿಂಗಳ ಹಿಂದೆ ಗಲ್ಫ್‌ಗೆ ಪರಾರಿಯಾಗಿದ್ದನು. ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಗಲ್ಫ್‌ನಲ್ಲಿದ್ದ ತಂದೆಯನ್ನು ಒತ್ತಾಯದಿಂದ ಊರಿಗೆ ಕರೆಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾದ ವಿಷಯಕ್ಕೆ ಸಂಬಂಧಿಸಿ ತಂದೆ ಕೆಲವು ಹೇಳಿಕೆಗಳನ್ನು ಪೊಲೀಸರಿಗೆ ನೀಡಿರುವುದಾಗಿ ಸೂಚನೆಯಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಪೊಲೀಸರು ಸಿದ್ಧವಾಗಿಲ್ಲ. ವೈಜ್ಞಾನಿಕ ರೀತಿಯ ತನಿಖೆ ಪೂರ್ತಿಗೊಳಿಸಿ ಪ್ರಕರಣದ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.