ಶವರ್ಮ ಸೇವಿಸಿ 14 ಮಕ್ಕಳು ಅಸ್ವಸ್ಥ: ಹೋಟೆಲ್‌ಗೆ ಬೀಗ

ಕಾಸರಗೋಡು: ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡಿನ ಹೋಟೆಲೊಂದರಿಂದ ತರಿಸಲಾಗಿದ್ದ ಶವರ್ಮ ಸೇವಿಸಿದ 14 ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ವಿಷಾಹಾರ ಸೇವಿಸಿ ಅಸ್ವಸ್ಥರಾದ ಮಕ್ಕಳೆಲ್ಲಾ 8ರಿಂದ 16ರ ಮಧ್ಯೆ ಪ್ರಾಯದವರಾಗಿದ್ದಾರೆ. ಇವರಿಗೆ ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಪಳ್ಳಿಕ್ಕೆರೆಯಲ್ಲಿ ನಡೆದ ನಬಿ ದಿನ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಭಾಗವಹಿಸಿದ ಮಕ್ಕಳಿಗೆ ನಬಿ ದಿನ ಸಂಘಟಕರು ಆಹಾರ ಪೂರೈಸಲು ತರಿಸಲಾಗಿದ್ದ ಆಹಾರ ಸಾಕಾಗದಿದ್ದಾಗ ಸಮೀಪದ ಹೋಟೆಲೊಂದರಿಂದ ಶವರ್ಮ ಖರೀದಿಸಿ ವಿತರಿಸಿದ್ದರು. ಅದನ್ನು ಸೇವಿಸಿದ ಅರ್ಧ ತಾಸಿನ ನಂತರ ಅವರು ತೀವ್ರ ಅಸ್ವಸ್ಥರಾಗತೊಡಗಿದರಲ್ಲದೆ ಅದರಲ್ಲೂ ಕೆಲವರಿಗೆ ವಾಂತಿಯ ಅನುಭವ ಉಂಟಾಯಿತು. ತಕ್ಷಣ ಬೇಕಲ ಪೊಲೀಸರು ಮತ್ತು ಪಳ್ಳಿಕ್ಕರೆ ಪಂಚಾಯತ್‌ನ ಆರೋಗ್ಯ ವಿಭಾಗಕ್ಕೆ ಮಾಹಿತಿ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.  ಶವರ್ಮ ಸೇವಿಸಿದ ಎಲ್ಲಾ ಮಕ್ಕಳಿಗೆ ಮೊನ್ನೆ ರಾತ್ರಿ ಮತ್ತೆ ತೀವ್ರ ದೈಹಿಕ ಅಸ್ವಸ್ಥತೆಯ ಅನುಭವ ಉಂಟಾಯಿತು. ತಕ್ಷಣ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದು ಅವರೆಲ್ಲಾ ಈಗ ಚೇತರಿಸತೊಡಗಿದ್ದಾರೆ.

ಶವರ್ಮ ತಯಾರಿಸಿದ ಹೋಟೆಲ್‌ಗೆ ಆಹಾರ ವಿಭಾಗದವರು ಬೀಗ ಜಡಿದಿದ್ದಾರೆ. ಅಲ್ಲಿ ತಯಾರಿಸಲಾಗಿದ್ದ ಶವರ್ಮದ ಸ್ಯಾಂಪಲನ್ನು ಸಂಗ್ರಹಿಸಿ ರಾಸಾಯನಿಕ ಪರೀಕ್ಷೆಗಾಗಿ ಕಲ್ಲಿಕೋಟೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರ ಫಲಿತಾಂಶ ಒಂದು ವಾರದೊಳಗೆ ಲಭಿಸಲು ಸಾಧ್ಯವಿದೆಯೆಂದೂ ಅದರ ಆಧಾರದಲ್ಲಿ ಮುಂದಿನ ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಸುರಕ್ಷಾ ವಿಭಾಗದ ಅಸಿಸ್ಟೆಂಟ್  ಕಮಿಶನರ್ ತಿಳಿಸಿದ್ದಾರೆ.

You cannot copy contents of this page