ತಂದೆಯ ಕಿರುಕುಳದಿಂದ: ಗರ್ಭಿಣಿಯಾದ 14ರ ಬಾಲಕಿ; ಪರಾರಿಯಾಗಲೆತ್ನಿಸಿದ ಆರೋಪಿ ಬಂಧನ

ಕಾಸರಗೋಡು: ತಂದೆಯ ನಿರಂತರ ಲೈಂಗಿಕ ಕಿರುಕುಳದಿಂದಾಗಿ 14ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆ ಬೆಳಕಿಗೆ ಬಂದಿದೆ. ಮಗಳು ಗರ್ಭಿಣಿಯಾದ ವಿಷಯ ತಿಳಿಯುತ್ತಲೇ ಪಾಸ್‌ಪೋರ್ಟ್‌ನೊಂದಿಗೆ ಪರಾರಿಯಾಗಲೆತ್ನಿಸಿದ ತಂದೆಯನ್ನು ಹೊಸದುರ್ಗ ಪೊಲೀಸರು ಅತೀ ಸಾಹಸಿಕವಾಗಿ ಸೆರೆ ಹಿಡಿದು  ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕರ್ನಾಟಕದ ಕೊಡಗು ನಿವಾಸಿಯಾದ 45ರ ಹರೆಯದ ವ್ಯಕ್ತಿ ವಿರುದ್ಧ ಕೇಸು ದಾಖಲಾಗಿದೆ. ಆರೋಪಿ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾರ್ಟರ್ಸ್‌ವೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದನು. ಎಂಟನೇ ತರಗತಿ ವಿದ್ಯಾರ್ಥಿನಿಯಾದ ಮಗಳಿಗೆ ಇತ್ತೀಚೆಗೆ ಅಸಹನೀಯ ಸೊಂಟನೋವು ಅನುಭವಗೊಂಡುದರಿಂದ ಇತ್ತೀಚೆಗೆ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ತಪಾಸಣೆಗಾಗಿ ಕರೆದೊಯ್ಯಲಾಗಿತ್ತು. ತಪಾಸಣೆ ವೇಳೆ ಸಂಶಯಗೊಂಡ ವೈದ್ಯರು ಬಾಲಕಿಯನ್ನು ಸ್ಕ್ಯಾನಿಂಗ್ ನಡೆಸಿದಾಗ ನಾಲ್ಕೂವರೆ ತಿಂಗಳ ಗರ್ಭಿಣಿಯೆಂದು ತಿಳಿದು ಬಂದಿದೆ. ಈ ವಿಷಯವನ್ನು ವೈದ್ಯರು ಹೊಸದುರ್ಗ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ಪರಾರಿಯಾಗಲು ಸಾಧ್ಯತೆ ಇದೆಯೆಂಬ ಸೂಚನೆಯ ಹಿನ್ನೆಲೆಯಲ್ಲಿ ಪೊಲೀಸರು ಕೊಡಗು ನಿವಾಸಿ ವಾಸಿಸುವ ಕ್ವಾರ್ಟರ್ಸ್‌ಗೆ ತಲುಪಿ ಆತನ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ತಾನು ಸೆರೆಗೀಡಾಗಲಿದ್ದೇನೆಂದು ತಿಳಿದ ಆರೋಪಿ ತನ್ನ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದನು. ಇದನ್ನರಿತ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಾ ಚೆರ್ಕಳವರೆಗೆ ಹಿಂಬಾಲಿಸಿದ್ದಾರೆ. ಆದರೆ ಅಲ್ಲಿಂದ ಯಾವ ಭಾಗಕ್ಕೆ ಹೋಗಿದ್ದಾನೆಂದು ಪತ್ತೆಹಚ್ಚಲಾಗಲಿಲ್ಲ. ಇದರಿಂದ ಪೊಲೀಸರು ಬರಿಗೈಯಲ್ಲಿ ಮರಳಿದ್ದರು. ಆರೋಪಿ ವಾಸಸ್ಥಳಕ್ಕೆ ತಲುಪಲು ಸಾಧ್ಯತೆ ಇದೆಯೆಂದು ತಿಳಿದ ಪೊಲೀಸರು ಈ ಬಗ್ಗೆ ಸ್ಥಳೀಯರಾದ ಕೆಲವರಲ್ಲಿ ತಿಳಿಸಿದ್ದರು. ನಿನ್ನೆ ಬೆಳಿಗ್ಗೆ ಆರೋಪಿ ಕ್ವಾರ್ಟರ್ಸ್‌ಗೆ ತಲುಪಿದ್ದು, ಈ ವೇಳೆ ನಾಗರಿಕರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈತನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ತಂದೆ ಹಲವು ಬಾರಿ ಕಿರುಕುಳ ನೀಡಿರುವುದಾಗಿ ಬಾಲಕಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

RELATED NEWS

You cannot copy contents of this page