1440 ಲೀಟರ್ ಸ್ಪಿರಿಟ್ ಪತ್ತೆ: ಇನ್ನೋರ್ವ ಸೆರೆ
ಕಾಸರಗೋಡು: ಓಣಂ ಹಬ್ಬ ಸಮೀಪಿಸುತ್ತಿದ್ದಂತೆ ಹೊರ ರಾಜ್ಯಗಳಿಂದ ಕೇರಳಕ್ಕೆ ಅಕ್ರಮ ಸ್ಪಿರಿಟ್ ಮತ್ತು ಮದ್ಯದ ಹೊಳೆಯೇ ಹರಿದು ಬರತೊಡಗಿದೆ. ಇದನ್ನು ತಡೆಗಟ್ಟಲು ಪೊಲೀಸರು ಮತ್ತು ಅಬಕಾರಿ ತಂಡದವರು ಜಿಲ್ಲೆಯ ಎಲ್ಲೆಡೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ನಗರದ ಅಡ್ಕತ್ತಬೈಲಿನಲ್ಲಿ ಕಾಸರಗೋಡು ಪೊಲೀಸರು ಮೊನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮಿನಿ ಲಾರಿಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 1440 ಲೀಟರ್ ಸ್ಪಿರಿಟ್ ವಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ಬಂಧಿಸಿದ್ದಾರೆ. ತಲಪ್ಪಾಡಿ ನಿವಾಸಿ ಮಣಿಕುಟ್ಟನ್ ಬಂಧಿತ ಆರೋಪಿ.
ಅಡ್ಕತ್ತಬೈಲಿನ ಅನುಷ್ ಆರ್. (24), ನೆಲ್ಲಿಕುಂಜೆಯ ಪ್ರಣವ್ ಶೆಣೈ (24) ಮತ್ತು ಕೋಟಯಂ ಕಾಞಿರಾ ಪಳ್ಳಿ ನಿವಾಸಿ ವಿ.ಸಿ. ಥೋಮಸ್ (25) ಎಂಬವರನ್ನು ಪೊಲೀಸರು ಮೊನ್ನೆಯೇ ಬಂಧಿಸಿದ್ದರು. ಮಾಲು ಸಾಗಿಸುತ್ತಿದ್ದ ಮಿನಿ ಲಾರಿಯನ್ನು ವಶಪಡಿಸಿಕೊಂಡಿದ್ದರು. ಈ ಈ ಸ್ಪಿರಿಟನ್ನು 48 ಕ್ಯಾನ್‌ಗಳಲ್ಲಿ ತುಂಬಿಸಿಡಲಾಗಿತ್ತು. ಪ್ರತೀ ಕ್ಯಾನ್‌ಗಳಲ್ಲಿ ತಲಾ 35 ಲೀಟರ್‌ನಂತೆ ಸ್ಪಿರಿಟ್ ಒಳಗೊಂಡಿತ್ತು. ಕಾಸರಗೋಡು ಡಿವೈಎಸ್‌ಪಿ ಕೆ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಪಿ. ನಳಿನಾಕ್ಷನ್ ಒಳಗೆಂಡ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಈ ಸ್ಪಿರಿಟನ್ನು ಮಂಗಳೂರಿನಿಂದ ಕೊಚ್ಚಿಗೆ ಸಾಗಿಸಲಾಗುತ್ತಿತ್ತೆಂದು ಇದನ್ನು ಕೊಚ್ಚಿಗೆ ಸಾಗಿಸಲು ಮಾತ್ರವೇ ನಮಗೆ ತಿಳಿಸಲಾಗಿತ್ತು. ಆದರೆ ಕೊಚ್ಚಿಯ ಯಾರಿಗಾಗಿ ಈ ಮಾಲನ್ನು ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ನಮಗೆ ತಿಳಿಯ ದೆಂದು ಬಂಧಿತ ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿ ದ್ದಾರೆ. ಆ ಹಿನ್ನೆಲೆಯಲ್ಲಿ ಈ ಸ್ಪಿರಿಟ್ ಯಾರಿಗೆ ಸಾಗಿಸಲಾಗುತ್ತಿತ್ತೆಂಬ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ. ಓಣಂಗೆ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು ಇನ್ನೊಂ ದೆಡೆ ಅಬಕಾರಿ ತಂಡಗಳು ಜಿಲ್ಲೆಯಲ್ಲಿ ಕಾರ್ಯಾಚರಣೆಗಿಳಿದಿವೆ. ಇದರಂತೆ ಕುಂಬಳೆ ಆರಿಕ್ಕಾಡಿಯಲ್ಲಿ ಕಾಸರ ಗೋಡು ಎಕ್ಸೈಸ್ ಎನ್‌ಫೋರ್ಸ್ ಮೆಂಟ್ ಆಂಟ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಪ್ರದೀಪ್ ಕುಮಾರ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆಲ್ಟೋ ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಅಬಕಾರಿ ತಂಡ ಆರಿಕ್ಕಾಡಿಯಲ್ಲಿ ಕಾರನ್ನು ತಪಾಸಣೆಗಾಗಿ ನಿಲ್ಲಿಸುವಂತೆ ಕೈಸನ್ನೆ ತೋರಿಸಿದಾಗ ಅದು ನಿಲ್ಲದೆ ಮುಂದಕ್ಕೆ ಸಾಗಿದೆ. ಅಬಕಾರಿ ತಂಡ ತಕ್ಷಣ ತಮ್ಮ ವಾಹನದಲ್ಲಿ ಅದನ್ನು ಹಿಂಬಾಲಿಸಿಕೊಂಡು ಕಾಸರಗೋಡು ಕೂಡ್ಲು ಸಿಪಿಸಿಆರ್‌ಐ ಬಳಿಯ ರಸ್ತೆಯಲ್ಲಿ ಆ ಕಾರನ್ನು ತಡೆದು ನಿಲ್ಲಿಸುವಲ್ಲಿ ಸಫಲವಾದರು. ಆಗ ಆ ಕಾರಿನಲ್ಲಿದ್ದವರು ಅಲ್ಲಿಂದ ತಪ್ಪಿಸಿಕೊಂಡರೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸುಧೀಂದ್ರನ್ ಎಂ.ವಿ, ಪ್ರಿವೆಂಟೀವ್ ಆಫೀಸರ್‌ಗಳಾದ (ಗ್ರೇಡ್) ಪ್ರಜಿತ್ ಕೆ.ಆರ್, ಜಿತೇಂದ್ರನ್ ಕೆ. ಇತರ ಸಿಬ್ಬಂದಿಗಳಾದ ಮಂಜುನಾಥನ್ ವಿ, ಅತುಲ್ ಟಿ.ವಿ, ಸೋನು ಸೆಬಾಸ್ಟಿಯನ್, ಸಿಜಿನ್ ಸಿ, ರೀನಾ ವಿ. ಮತ್ತು ಚಾಲಕ ಸತ್ಯನ್ ಎಂಬವರು ಒಳಗೊಂಡಿದ್ದರು. ಇನ್ನೊಂದೆಡೆ ಬದಿಯಡ್ಕ ರೇಂಜ್ ಎಕ್ಸೈಸ್ ಕಚೇರಿಯ ಇನ್ಸ್‌ಪೆಕ್ಟರ್ ಅಬ್ದುಲ್ಲ ಕುಂಞಿ ಬಿ.ಎಂ.ರ ನೇತೃತ್ವದ ಅಬಕಾರಿ ತಂಡ ಮಂಡಬೆಟ್ಟುನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 3.6 ಲೀಟರ್ ಕರ್ನಾಟಕ ಮದ್ಯ ಕೈವಶವಿರಿಸಿದುದಕ್ಕೆ ಸಂಬಂಧಿಸಿ ಅಡೂರು ಮಂಡಬೆಟ್ಟು ನಿವಾಸಿ ರಮೇಶ್ ಎಂ. (56) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.