18ರ ಯುವತಿ ಹಾಗೂ ಗೆಳೆಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪಾಲಕ್ಕಾಡ್: ವೆಂಗನ್ನೂರಿನಲ್ಲಿ ಯುವಕ ಹಾಗೂ ಯುವತಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ. ವೆಂಗನ್ನೂರು ವಲಿಪ್ಪರಂಬ್ ಉಣ್ಣಿಕೃಷ್ಣನ್‌ರ ಪುತ್ರಿ ಉಪನ್ಯ (18) ಕುತ್ತನ್ನೂರು ಚಿಂಬುಕ್ಕಾಡ್ ಮರೋಣಿ ಕಣ್ಣನ್‌ರ ಪುತ್ರ ಸುಕಿನ್ (23) ಮೃತಪಟ್ಟವರು. ಯುವತಿಯ ಮನೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಇವರು ಪ್ರೀತಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ವೆಂಗನ್ನೂರ್‌ನಲ್ಲಿ ಅಯ್ಯಪ್ಪ ದೀಪೋತ್ಸವ ನಡೆಯುವ ಸ್ಥಳದಿಂದ ಶನಿವಾರ ರಾತ್ರಿ 11 ಗಂಟೆ ವೇಳೆಗೆ ಇವರಿಬ್ಬರೂ ಮನೆಗೆ ತೆರಳಿದ್ದರೆನ್ನಲಾಗಿದೆ. ಈ ಸಮಯದಲ್ಲಿ ಮನೆಯಲ್ಲಿ ಇತರರು ಇರಲಿಲ್ಲವೆನ್ನಲಾಗಿದೆ. ಸೀರೆಯ ಎರಡು ತುದಿಗಳಲ್ಲಾಗಿ ಇವರು ಆತ್ಮಹತ್ಯೆಗೈದಿರುವುದು ಕಂಡು ಬಂದಿದೆ. ರಾತ್ರಿ 12 ಗಂಟೆವೇಳೆಗೆ ಉಪನ್ಯಳ ಸಹೋದರ ದೀಪೋತ್ಸವದಿಂದ ಹಿಂತಿರುಗಿದಾಗ ನೇಣು ಬಿಗಿದ ಬಗ್ಗೆ ತಿಳಿದು ಬಂದಿದ್ದು, ತನಿಖೆ ಆರಂಭಿಸಿರುವುದಾಗಿ ಆಲತ್ತೂರು ಪೊಲೀಸರು ತಿಳಿಸಿದ್ದಾರೆ.