18 ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಸಫಿಯಾಳ ಅಸ್ಥಿಪಂಜರವನ್ನು ಹೆತ್ತವರಿಗೆ ಹಸ್ತಾಂತರಿಸುವಂತೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪು

ಕಾಸರಗೋಡು: ೧೮ ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಮೂಲತಃ ಕೊಡಗು ಅಯ್ಯಂಗೇರಿ ನಿವಾಸಿ ಸಫಿಯ (13)ಳ ತಲೆಬುರುಡೆ ಸೇರಿದಂತೆ ಆಕೆಯ ಅಸ್ಥಿಪಂಜರ ವನ್ನು ಹೆತ್ತವರಿಗೆ ಹಸ್ತಾಂತರಿಸುವಂತೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್  ನ್ಯಾಯಾಲಯದ ನ್ಯಾಯಾಧೀಶರಾದ ಸಾನು ಎಸ್ ಪಣಿಕ್ಕರ್ ತೀರ್ಪು ನೀಡಿದ್ದಾರೆ.

ಕೊಲೆಗೈಯ್ಯಲ್ಪಟ್ಟ ಸಫಿಯಾಳ ತಲೆಬುರುಡೆ ಸೇರಿದಂತೆ ಅಸ್ಥಿಪಂಜರವನ್ನು ಒಂದು ಪ್ರಧಾನ ಪುರಾವೆಯನ್ನಾಗಿ ಈಗಲೂ ಸಂರಕ್ಷಿಸಿಡಲಾಗಿದೆ. ಅದನ್ನು ನಮ್ಮ ಮತಾಚಾರ ಪ್ರಕಾರ ಸಂಸ್ಕರಿಸಲು  ಬಿಟ್ಟುಕೊಡುವಂತೆ ಕಳೆದ ತಿಂಗಳು ಕೊಡಗು ಅಯ್ಯಂಗೇರಿ ನಿವಾಸಿಗಳಾದ ಸಫಿಯಾಳ ತಂದೆ ಮೊಯ್ದು ಮತ್ತು ತಾಯಿ ಆಯುಷುಮ್ಮ ಕಳೆದ ತಿಂಗಳು ಜಿಲ್ಲಾ  ಪ್ರಿನ್ಸಿಪಲ್  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿನಂತಿಸಿಕೊಂಡಿದ್ದರು.  ಅದನ್ನು ಪರಿಶೀಲಿಸಿದ ನ್ಯಾಯಾಲಯ ಕೊನೆಗೆ ಸಫಿಯಾಳ ತಲೆಬುರುಡೆ ಸೇರಿದಂತೆ ಅಸ್ಥಿಪಂಜರವನ್ನು ಆಕೆಯ ಹೆತ್ತವರಿಗೆ ಬಿಟ್ಟುಕೊಡುವಂತೆ ತೀರ್ಪು ನೀಡಿದೆ. ಇದರಂತೆ ಸಫಿಯಾಳ ಹೆತ್ತವರು ನಾಳೆ ಕಾಸರಗೋಡು ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಅಸ್ಥಿಪಂ ಜರವನ್ನು ಪಡೆದುಕೊಳ್ಳಲಿದ್ದಾರೆ.

ಮುಳಿಯಾರು ನಿವಾಸಿ ಹಾಗೂ ಗೋವಾದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರನಾಗಿದ್ದ ಕೆ.ಸಿ. ಹಂಸ ಮತ್ತು ಆತನ ಪತ್ನಿ ಮೈಮೂನಾರ ಗೋವಾದ ಲ್ಲಿರುವ ಮನೆ ಕೆಲಸಕ್ಕಾಗಿ ೨೦೦೬ರಲ್ಲಿ ಸಫಿಯಾಳನ್ನು ಅಲ್ಲಿಗೆ ಕರೆದೊಯ್ದಿದ್ದರು. ಹೀಗೆ ಅಲ್ಲಿ ಮನೆ ಕೆಲಸಕ್ಕೆ ಸೇರ್ಪಡೆಗೊಂಡ ಸಫಿಯಾಳಿಗೆ ಬಳಿಕ ದೈಹಿಕ ಹಿಂಸೆ ನೀಡಲಾಯಿತೆಂದೂ ಆರೋಪಿಸಲಾಗಿತ್ತು. ಅಡುಗೆ ಸಮಯದಲ್ಲಿ ಆಕೆಯ ದೇಹದ ಮೇಲೆ ಬಿಸಿನೀರು ಬಿದ್ದು ಗಂಭೀರ ಸುಟ್ಟ ಗಾಯಗೊಂಡಿದ್ದಳು. ನಂತರ ಆಕೆಯನ್ನು ಅಲ್ಲೇ ಕೊಂದು ಮೃತದೇಹವನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿಸಿ ಅದನ್ನು ಗೋವಾದಲ್ಲಿ ನಿರ್ಮಾಣ ಹಂತ ದಲ್ಲಿದ್ದ ಅಣೆಕಟ್ಟಿನ ಬಳಿ ದಫನ ಗೈಯ್ಯಲಾಗಿತ್ತೆಂದು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸ ಲಾಗಿತ್ತು. ಸಫಿಯಾ ನಾಪತ್ತೆಯಾದ ಬಳಿಕ ಆದೂರು ಪೊಲೀಸರು ಮೊದಲು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅದನ್ನು ಕೊಲೆ ಪ್ರಕರಣವಾಗಿ ಬದಲಾಯಿಸಲಾಗಿತ್ತು. ಆ ಬಳಿಕ ಅದರ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ  ಹಸ್ತಾಂತರಿಸಲಾಗಿತ್ತು. ಕ್ರೈಂ ಬ್ರಾಂಚ್ ನಡೆಸಿದ ತನಿಖೆಯಲ್ಲಿ 2008 ಜೂನ್ 5ರಂದು ಸಫಿಯಾಳ ಅಸ್ಥಿ ಪಂಜರವನ್ನು ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನ ಬಳಿಯಿಂದ ಪತ್ತೆ ಹಚ್ಚಲಾಗಿತ್ತು. ಅದನ್ನು ಬಳಿಕ ನ್ಯಾಯಾಲಯದಲ್ಲಿ ಪುರಾವೆಯಾಗಿ ಹಾಜರುಪಡಿಸಲಾಗಿತ್ತು.

ಈ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಆರೋಪಿ ಕೆ.ಸಿ. ಹಂಸನಿಗೆ ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ನಂತರ  ಆ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜೀವಾವಧಿ ಸಜೆಯನ್ನಾಗಿಸಿ ತೀರ್ಪು ನೀಡಿತ್ತು.

RELATED NEWS

You cannot copy contents of this page