2012ರಲ್ಲಿ ಪುತ್ರನ ಜೊತೆ ಕಾಸರಗೋಡಿನಲ್ಲಿ ಸೆರೆಯಾದ ಮಹಿಳೆ ನಾಪತ್ತೆ: ಹಲವು ವರ್ಷಗಳ ಬಳಿಕ ಉತ್ತರಪ್ರದೇಶದಿಂದ ಪತ್ತೆ
ಕಾಸರಗೋಡು: 2012ರಲ್ಲಿ ಎರಡು ವರ್ಷದ ಪುತ್ರನ ಸಹಿತ ಕಾಸರಗೋಡು ನಗರದಲ್ಲಿ ಅಲೆದಾಡುತ್ತಿದ್ದ ಮಧ್ಯೆ ರಾಧಾ ಎಂಬ ಮಹಿಳೆ ಪೊಲೀಸರ ಸೆರೆಯಾಗಿದ್ದಳು. ಪ್ರಶ್ನಿಸಿದಾಗ ಮಾತನಾಡುವ ಸಾಮರ್ಥ್ಯವಿಲ್ಲವೆಂದು ತಿಳಿದು ಬಂತು. ನ್ಯಾಯಾಲಯದ ನಿರ್ದೇಶ ಪ್ರಕಾರ ರಾಧ ಹಾಗೂ ಮಗನನ್ನು ಮಹಿಳಾ ಮಂದಿರಕ್ಕೆ ಸೇರಿಸಲಾಯಿತು. ಆದರೆ ಈಕೆಯ ಸ್ವದೇಶ ಎಲ್ಲಿ ಎಂದು ಆವಾಗ ತಿಳಿದಿರಲಿಲ್ಲ. ಮಗ ದೊಡ್ಡವನಾದಾಗ ಶಿಕ್ಷಣದ ಸಮಸ್ಯೆ ಉಂಟಾಗಿದ್ದು, ಚೈಲ್ಡ್ ವೆಲ್‌ಫೇರ್ ಸಮಿತಿ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿತು. ಇದರಿಂದ 2016ರಲ್ಲಿ ಪುತ್ರನನ್ನು ಕಾರಕುಂಡ್ ಡೋನ್‌ಬೋಸ್ಕೊ ವಿದ್ಯಾಲಯಕ್ಕೆ ಸೇರಿಸಲಾಯಿತು. 2019 ಜೂನ್ 30ರಂದು ಜೊತೆಗಿದ್ದವರು ಪ್ರಾರ್ಥನೆಗೆಂದು ತೆರಳಿದ ಸಂದರ್ಭದಲ್ಲಿ ರಾಧಾ ಅಲ್ಲಿಂದ ಪರಾರಿಯಾಗಿದ್ದಳು. ಈ ವಿಷಯದಲ್ಲಿ ಸಂಸ್ಥೆಯ ಅಧಿಕಾರಿ ನೀಡಿದ ದೂರಿನಂತೆ ಪರಿಯಾರಂ ಪೊಲೀಸರು ಕೇಸು ದಾಖಲಿಸಿದ್ದರು. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ರಾಧಾ ಚುಡಲ ಎಂಬಲ್ಲಿ ಖಾಸಗಿ ಬಸ್‌ಗೆ ಹತ್ತಿರುವುದಾಗಿಯೂ, ಕಣ್ಣೂರು, ತಾವಕ್ಕರಕ್ಕೆ ತಲುಪಿರುವು ದಾಗಿಯೂ ತಿಳಿದು ಬಂತು. ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ರೈಲಿನಲ್ಲಿ ತೆರಳಿರುವುದಾಗಿಯೂ ಕಂಡು ಬಂತು. ರಾಧಾಳ ನಾಪತ್ತೆ ಪ್ರಕರಣ ಅಂದು ಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಆ ಪತ್ರಿಕೆಗಳ ಕಟ್ಟಿಂಗ್‌ಗಳನ್ನು ದೇಶದೆಲ್ಲೆಡೆಯ ಪೊಲೀಸ್ ಠಾಣೆಗಳಿಗೆ ಪರಿಯಾರಂ ಪೊಲೀಸರು ಕಳುಹಿಸಿಕೊಟ್ಟಿದ್ದರು.
ಬಳಿಕ ಪತ್ತೆಗಾಗಿ ವಿವಿಧ ರೀತಿಯಲ್ಲಿ ತನಿಖೆ ನಡೆಸಿದರೂ ಸಾಧ್ಯವಾಗಿರಲಿಲ್ಲ. ಮೂಗಿಯಾದ ಕಾರಣ ರಾಧಾ ಮೊಬೈಲ್ ಫೋನ್ ಉಪಯೋಗಿಸುತ್ತಿರಲಿಲ್ಲ. ಇದು ಈಕೆಯ ಪತ್ತೆಗೆ ಪ್ರಧಾನ ಹಿನ್ನಡೆಯಾಯಿತು. ತಿಂಗಳುಗಳ ಹಿಂದೆ ಪರಿಯಾರಂ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ನಾಪತ್ತೆಯಾದವರ ಯಾದಿಯನ್ನು ಪರಿಶೀಲಿಸಿದಾಗ ರಾಧಾಳ ಪ್ರಕರಣದಲ್ಲಿ ಯಾವುದೇ ಕುರುಹು ಲಭಿಸಿಲ್ಲವೆಂಬುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪುನಃ ತನಿಖೆಗೆ ಚಾಲನೆ ನೀಡಿದ್ದರು. ರಾಧಾಳ ಚಿತ್ರ ಸಹಿತವಿರುವ ಮಾಹಿತಿಗಳನ್ನು ವಿವಿಧ ಠಾಣೆಗಳಿಗೆ ಕಳುಹಿಸಿಕೊಟ್ಟರು. ಕೆಲವೆಡೆಗಳಿಂದ ಅದಕ್ಕೆ ಉತ್ತರ ಲಭಿಸಿತು. ಉತ್ತರಪ್ರದೇಶದಿಂದ ಲಭಿಸಿದ ಮಾಹಿತಿಯಂತೆ ರಾಧಾಳ ರೂಪ ಸದೃಶವಿರುವ ಮಹಿಳೆಯೊಬ್ಬರು ಮಹಿಳಾ ಮಂದಿರದಲ್ಲಿರುವುದಾಗಿ ಅಲ್ಲಿಂದ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಉತ್ತರ ಪ್ರದೇಶಕ್ಕೆ ತೆರಳಿ ಮಹಿಳಾ ಮಂದಿರದಲ್ಲಿ ಇರುವುದು ಕಾರಕುಂಡ್‌ನಿಂದ ನಾಪತ್ತೆಯಾದ ರಾಧಾ ಎಂಬ ಮಹಿಳೆಯಾಗಿದ್ದಾಳೆ ಎಂದು ಖಚಿತಪಡಿಸಿದರು. ಬಳಿಕ ಈಕೆಯನ್ನು ಪರಿಯಾರಂಗೆ ಕರೆತಂದು ನ್ಯಾಯಾಲಯದಲ್ಲಿ ಹಾಜರುಪಡಿ ಸಿದಾಗ ಈಕೆಯನ್ನು ನ್ಯಾಯಾಲಯ ಕಾಸರಗೋಡು ಮಹಿಳಾ ಮಂದಿರಕ್ಕೆ ಸೇರಿಸಲು ಆದೇಶಿಸಿದೆ. ತನಿಖಾ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರಾಜೇಶ್, ಸುಭಾಷ್, ರಮೇಶನ್, ಸಿವಿಲ್ ಪೊಲೀಸ್ ಅಧಿಕಾರಿಯರಾದ ಮಹಿತ, ಲತಿಕ, ಸೌಮ್ಯ ಎಂಬಿವರು ಇದ್ದರು. ರಾಧಾ ಉತ್ತರಪ್ರದೇಶ ನಿವಾಸಿಯಾಗಿದ್ದಾಳೆಂದು ಪೊಲೀಸರು ಪತ್ತೆಹಚ್ಚಿದ್ದಾರೆ.