25ರ ಯುವಕನ ಮೂತ್ರ ಚೀಲದೊಳಗಿತ್ತು ಮೂರು ಮೀಟರ್ ವಿದ್ಯುತ್ ವಯರ್
ತಿರುವನಂತಪುರ: 25ರ ಹರೆಯದ ಯುವಕನ ಮೂತ್ರಚೀಲ ದೊಳಗಿಂದ 3 ಮೀಟರ್ ಇಲೆಕ್ಟ್ರಿಕ್ ಇನ್ಸುಲೇಶನ್ ವಯರನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಅಸಹನೀಯವಾದ ನೋವು ಅನುಭವಗೊಂಡ ತಿರುವನಂತಪುರ ನಿವಾಸಿಯಾದ ಯುವಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿದ್ದನು. ಆತನನ್ನು ಎಕ್ಸ್‌ರೇಗೊಳಪಡಿಸಿದಾಗ ಮೂತ್ರ ಚೀಲ ದೊಳಗೆ 3 ಮೀಟರ್ ವಿದ್ಯುತ್ ವಯರ್ ಸುತ್ತಿಕೊಂ ಡಿರುವುದು ಪತ್ತೆಯಾಗಿದೆ. ವೈದ್ಯರು ತಕ್ಷಣ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ವಯರ್‌ನ್ನು ಹಲವು ತುಂಡುಗಳಾಗಿಸಿ ಹೊರತೆಗೆದು ಯುವಕನನ್ನು ಜೀವಾಪಾಯದಿಂದ ಪಾರುಮಾಡಿದ್ದಾರೆ. ಬಳಿಕ ಯುವಕನನ್ನು ವಿಚಾರಿಸಿದಾಗ ಆತ ಸ್ವತಃ ಈ ವಯರನ್ನು ಮೂತ್ರನಾಳದ ಮೂಲಕ ಚುಚ್ಚಿ ಮೂತ್ರ ಚೀಲಕ್ಕೆ ತುರುಕಿಸಿದ್ದನೆಂದು ತಿಳಿದುಬಂದಿದೆ. ಆದರೆ ಯಾಕಾಗಿ ಈತ ಈ ಕೃತ್ಯವೆಸಗಿದ್ದಾನೆಂದು ತಿಳಿದುಬಂದಿಲ್ಲ. ಈತನಿಗೆ ಮಾನಸಿಕವಾಗಿ ಏನಾದರೂ ಸಮಸ್ಯೆಯಿದೆಯೇ ಎಂದು ಪರಿಶೀಲಿಸುವುದಾಗಿ ವೈದ್ಯರು ತಿಳಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಯುವಕ ಗುಣಮುಖನಾಗುತ್ತಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಯಥಾ ಸಮಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಯುವಕನ ಜೀವ ರಕ್ಷಿಸಿದ ವೈದ್ಯರುಗಳನ್ನು ಆರೋಗ್ಯ ಸಚಿವೆ ವೀಣಾ ಜೋರ್ಜ್ ಅಭಿನಂದಿಸಿದ್ದಾರೆ.