28 ವರ್ಷ ಹಿಂದೆ ರ‍್ಯಾಗಿಂಗ್‌ಗೆ ತುತ್ತಾಗಿ ಮಾನಸಿಕವಾಗಿ ಕುಗ್ಗಿದ್ದ ಸಾವಿತ್ರಿ ಸಾವಿಗೆ ಶರಣು
ಹೊಸದುರ್ಗ: ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿ ಕಣ್ಣು ಕಳೆದುಕೊಂಡ ವೆಂಞಾಟೆ ಎಂ.ವಿ. ಸಾವಿತ್ರಿ (45) ನಿನ್ನೆ ಮೃತಪಟ್ಟರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಶಾಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ನಡೆಸುತ್ತಿದ್ದ ಇವರು ಯುವಜನೋತ್ಸವ ನೃತ್ಯವೇದಿಕೆ ಗಳಲ್ಲಿ ಬಹುಮಾನಗಳನ್ನು ಪಡೆಯುತ್ತಿದ್ದರು. 1996ರಲ್ಲಿ ಕಾಞಂಗಾಡ್ ನೆಹರೂ ಕಾಲೇಜ್‌ನ ವಿದ್ಯಾರ್ಥಿನಿಯಾಗಿದ್ದ ಸಾವಿತ್ರಿ ರ‍್ಯಾಗಿಂಗ್‌ಗೆ ತುತ್ತಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಅಂಕ ಗಳಿಸಿದ ಇವರು ನೆಹರು ಕಾಲೇಜ್‌ನಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಸೇರಿದ್ದರು. ನಾಲ್ಕು ಹೆಣ್ಣುಮಕ್ಕಳಿರುವ ಕುಟುಂಬದ ನಿರೀಕ್ಷೆಯಾಗಿದ್ದರು ಇವರು. ಕಾಲೇಜಿಗೆ ಸೇರಿ ಮೂರನೇ ದಿನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದು, ಅಂದಿನಿಂದ ಮಾನಸಿಕವಾಗಿ ನೊಂದಿದ್ದರು.
ಬಳಿಕ ಕಾಲೇಜಿಗೆ ತೆರಳದೆ ಮನೆಯಿಂದ ಹೊರಗಿಳಿಯದೆ ಕೊಠಡಿಯಲ್ಲಿ ಏಕಾಂಗಿಯಾಗಿ ಬದುಕು ಸವೆಸಿದರು. ತನ್ನ ಬಲಕಣ್ಣನ್ನು ಸ್ವಂತವಾಗಿ ಕಿತ್ತು ತೆಗೆದು ತನ್ನನ್ನು ರ‍್ಯಾಗಿಂಗ್‌ಗೊಳಪಡಿಸಿದ ಸಮಾಜವನ್ನು ನೋಡುವುದು ಬೇಡವೆಂದು ತೀರ್ಮಾನಿಸಿ ಮನೆಯೊಳಗೆ ಕುಳಿತುಕೊಂಡಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದರೂ ತಾಯಿ ಎಂ.ವಿ. ವಟ್ಟಿಚ್ಚಿ, ಸಹೋದರಿಯರು ದೀರ್ಘಕಾಲ ಸಾವಿತ್ರಿಯವರಿಗೆ ಚಿಕಿತ್ಸೆ ನೀಡಿದರು. ಈ ಹಿನ್ನೆಲೆಯಲ್ಲಿ ಅಲ್ಪ ಚೇತರಿಸಿಕೊಂಡ ಅವರು ಕಳೆದ ಎರಡು ವರ್ಷಗಳಿಂದ ಮಂಜೇಶ್ವರದ ಸ್ನೇಹಾಲಯದಲ್ಲಿ ವಾಸವಾಗಿದ್ದರು. ಅಲ್ಲಿ ಬಿದ್ದು ಗಾಯಗೊಂಡಿದ್ದ ಇವರು ಮಂಗಳೂರು ಹಾಗೂ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ದಿ| ಕೆ.ಪಿ. ಅಂಬು ಹಾಗೂ ಎಂ.ವಿ. ವಟ್ಟಿಚ್ಚಿ ದಂಪತಿ ಪುತ್ರಿಯಾಗಿದ್ದಾರೆ.