4 ತಿಂಗಳ ಮಗುವನ್ನು ಬಾವಿಗೆಸೆದು ಕೊಲೆ
ಪಯ್ಯನ್ನೂರು: ನಾಲ್ಕು ತಿಂಗಳ ಹೆಣ್ಣುಮಗುವನ್ನು ಬಾವಿಗೆಸೆದು ಕೊಲೆಗೈದ ಘಟನೆ ವಳಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪಿನಿಶ್ಶೇರಿ ಮಾಂಕಡವು ಪಾರಕ್ಕಲ್ ಎಂಬಲ್ಲಿ ನಡೆದಿದೆ. ಇದೇ ವೇಳೆ ಮಗುವನ್ನು ಕೊಲೆಗೈದವರು ಯಾರೆಂದು ತಿಳಿಯಲು ತಂದೆ, ತಾಯಿ, ಸಂಬಂಧಿಕರು ಹಾಗೂ ನೆರೆಮನೆ ನಿವಾಸಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ.
ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ತಮಿಳುನಾಡು ನಿವಾಸಿಗಳಾದ ಮುತ್ತು-ಅಕ್ಕಮ್ಮಲ್ ದಂಪತಿಯ ಮಗು ಯಾಸಿಕ ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ತಂದೆ, ತಾಯಿ, ಸಂಬಂಧಿ ಕರಾದ ಇಬ್ಬರು ಮಕ್ಕಳೊಂದಿಗೆ ನಿನ್ನೆ ರಾತ್ರಿ ಮಗು ನಿದ್ರಿಸಿತ್ತು. ಇಂದು ಮುಂಜಾನೆ 1 ಗಂಟೆಗೆ ತಾಯಿ ಎಚ್ಚೆತ್ತು ನೋಡಿದಾಗ ಮಗು ನಾಪತ್ತೆಯಾಗಿತ್ತು. ಕೂಡಲೇ ಪತಿಯನ್ನು ಎಬ್ಬಿಸಿ ಕ್ವಾರ್ಟರ್ಸ್ ನೊಳಗೆ, ಹೊರಗೆ ಹುಡುಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ಈ ಮಧ್ಯೆ ಮಗು ಕ್ವಾರ್ಟರ್ಸ್‌ನ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ಕೂಡಲೇ ಮೇಲಕ್ಕೆತ್ತಿ ಪಾಪಿನಿಶ್ಶೇರಿ ಸಿಎಚ್‌ಸಿಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕೊಲೆಕೃತ್ಯ ನಡೆಸಿದವರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಮಿಳುನಾಡು ನಿವಾಸಿ ದಂಪತಿಗಳು ವಾಸಿಸುವ ಕ್ವಾರ್ಟರ್ಸ್‌ನ ಸಮೀಪದಲ್ಲಿ ನಿರ್ಮಾಣ ಕಾರ್ಮಿಕರಾದ ಬಂಗಾಲ ನಿವಾಸಿಗಳೂ ವಾಸಿಸುತ್ತಿದ್ದಾರೆ.