45 ಅಡಿ ಆಳದ ಬಾವಿಗೆ ಹಾರಿದ ಯುವಕ: ರಕ್ಷಿಸಿದ ಅಗ್ನಿಶಾಮಕ ದಳ
ಕಾಸರಗೋಡು: ಬಾವಿಗೆ ಹಾರಿದ ಯುವಕನನ್ನು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. ವಿದ್ಯಾನಗರ ನೆಲ್ಕಳ ನಿವಾಸಿ ಅನಿಲ್ ಕುಮಾರ್ (45) ಎಂಬಾತ ಹೊಸ ಬಸ್ ನಿಲ್ದಾಣಕ್ಕೆ ಸಮೀಪದ ಕೋಟೆಕಣಿಯ 45 ಅಡಿ ಆಳ ಹಾಗೂ ಸುಮಾರು 45 ಅಡಿ ನೀರು ಇರುವ ಬಾವಿಗೆ ನಿನ್ನೆ ಬೆಳಿಗ್ಗೆ ಎಲ್ಲರೂ ನೋಡುತ್ತಿರುವಂತೆಯೇ ಹಾರಿದ್ದಾನೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸಲು ಮೊದಲು ಬಾವಿಯೊಳಗೆ ತಮ್ಮ ಬಲೆ ಇಳಿಸಿದ್ದಾರೆ. ಆದರೆ ಆತ ಅದರೊಳಗೆ ಪ್ರವೇಶಿಸಲು ತಯಾರಾಗಲಿಲ್ಲ. ಕೊನೆಗೆ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಕೆ. ಶ್ರೀಜೇಶ್ ಬಾವಿಗಿಳಿದಾಗ ಅನಿಲ್ ಕುಮಾರ್ ಅಗ್ನಿಶಾಮಕದಳ ಬಾವಿಗಿಳಿಸಿದ ಬಲೆಯೊಳಗೆ ಪ್ರವೇಶಿಸಿದನು. ತಕ್ಷಣ ಆತನನ್ನು ಅಗ್ನಿಶಾಮಕದಳದವರು ಬಾವಿಯಿಂದ ಮೇಲಕ್ಕೆತ್ತಿ ಪ್ರಾಣ ರಕ್ಷಿಸಿದ ಬಳಿಕ ಕಾಸರಗೋಡು ಪೊಲೀಸರಿಗೆ ಹಸ್ತಾಂತರಿ ಸಿದ್ದಾರೆ. ಅಗ್ನಿಶಾಮಕದಳ ಸ್ಟೇಷನ್ ಆಫೀಸರ್ ಗೋಪಾಲಕೃಷ್ಣನ್ ಮಾವಿಲ ನೇತೃತ್ವದಲ್ಲಿ ಸಿಬ್ಬಂದಿಗಳಾದವಿ.ಕೆ. ನಿಧೀಶ್, ಪಿ.ಜಿ. ಜೀವನ್, ಕೆ. ನಿರೂಪ್, ಎಸ್. ಅರುಣ್ ಕುಮಾರ್, ಕೆ. ಶ್ರೀಜಿಷ್, ಅರುಣ ಪಿ. ನಾಯರ್, ಇ. ಪ್ರಸೀದ, ಮಿಥುನ್ ಮತ್ತು ಶ್ರೀಜಿತ್ ಎಂಬವರನ್ನೊಳ ಗೊಂಡ ತಂಡ ಈ ರಕ್ಷಾ ಕಾರ್ಯಾಚರಣೆ ನಡೆಸಿದೆ.