ಕಾಸರಗೋಡು: ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕ ಪ್ರದೇಶಗಳು, ರಸ್ತೆ ಹಾಗೂ ಉಪಯೋಗ ಶೂನ್ಯ ಹಿತ್ತಿಲುಗಳಲ್ಲಿ ತಂದೆಸೆಯುವವರನ್ನು ಪತ್ತೆಹಚ್ಚಿ ಅವರಿಗೆ ದೊಡ್ಡ ಮಟ್ಟದ ಜುಲ್ಮಾನೆ ವಿಧಿಸುವ ಕ್ರಮದ ಬೆನ್ನಲ್ಲೇ ಮನೆಗಳು ಮತ್ತು ಇತರ ಕಟ್ಟಡಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸುವವರಿಗೆ ಕಟ್ಟಡ ತೆರಿಗೆ ಯಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದೆಂದು ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ.
ಮನೆಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸಲು ಸೂಕ್ತ ರೀತಿಯ ಕಿಚನ್ ಬಿನ್, ಹೆಚ್ಚುವರಿ ತ್ಯಾಜ್ಯವನ್ನು ಸಂಸ್ಕರಿಸಬೇಕಾಗಿ ಬರುವ ಮನೆಗಳಿಗೆ ಬಯೋಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸಿ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸಿದಲ್ಲಿ ಅಂತಹ ಮನೆಗಳಿಗೆ ಈ ತೆರಿಗೆ ರಿಯಾಯಿತಿ ಲಭಿಸಲಿದೆ. ಮನೆಯವರು ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುವುದರ ಮೇಲೆ ಹಸಿರು ಕ್ರಿಯಾ ಪಡೆ ಸದಾ ನಿಗಾ ಇರಿಸಲಿದೆ. ರಾಜ್ಯದ 94.58 ಲಕ್ಷಗಳಷ್ಟು ಮನೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 25.12 ಲಕ್ಷದಷ್ಟು ಮನೆಗಳಲ್ಲಿ ಮಾತ್ರವೇ ತಮ್ಮ ತ್ಯಾಜ್ಯವನ್ನು ಅವರೇ ಸಂಸ್ಕರಿಸುತ್ತಿದ್ದಾರೆ ಎಂದು ಗುರುತಿಸಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.