6 ವರ್ಷದ ಬಾಲಕನ ಮೃತದೇಹ ಕೊಳದಲ್ಲಿ ಪತ್ತೆ: ಕೊಲೆ ಶಂಕೆ
ತೃಶೂರು: ಇಲ್ಲಿಗೆ ಸಮೀಪದ ಮಾಳ ಎಂಬಲ್ಲಿ ಕೊಳದಲ್ಲಿ ಆರು ವರ್ಷ ಪ್ರಾಯದ ಬಾಲಕನ ಮೃತದೇಹ ಪತ್ತೆಯಾಗಿದೆ. ಇದು ಕೊಲೆ ಕೃತ್ಯವೆಂದು ಪೊಲೀಸರು ಶಂಕಿಸಿದ್ದು, ನೆರೆಮನೆ ನಿವಾಸಿ ಜೋಜೊ (20)ನನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕನಿಗೆ ದೌರ್ಜನ್ಯಗೈಯ್ಯಲು ಆರೋಪಿ ಯತ್ನಿಸಿದ್ದನೆನ್ನಲಾಗಿದೆ. ಈ ವೇಳೆ ಬಾಲಕ ಪ್ರತಿಭಟಿಸಿರುವುದೇ ಕೊಲೆಗೆ ಕಾರಣವೆಂದು ತಿಳಿಯಲಾಗಿದೆ. ಜೋಜೊ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡ ವ್ಯಕ್ತಿಯಾಗಿದ್ದಾನೆಂದು, ಬೈಕ್ ಕಳವು ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಬೈಕ್ ಕಳವು ಪ್ರಕರಣದಲ್ಲಿ ಜಾಮೀನಿನಲ್ಲಿ ಈತ ಬಿಡುಗಡೆಗೊಂಡಿದ್ದನು. ಬಾಲಕನ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುವ ತಂಡದಲ್ಲಿ ಜೋಜೊ ಕೂಡಾ ಸೇರಿಕೊಂಡಿದ್ದನು. ಆದರೆ ಈತನ ಚಲನವಲನಗಳಲ್ಲಿ ಶಂಕೆ ತೋರಿ ಸ್ಥಳೀಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ಕೊಳದಲ್ಲಿರಬೇಕೆಂದು ಈತ ತಿಳಿಸಿದ್ದಾನೆ. ಈ ವೇಳೆಗೆ ಬಾಲಕ ನಾಪತ್ತೆಯಾಗಿ ೩ ಗಂಟೆ ಕಳೆದಿತ್ತು. ಬಳಿಕ ಕೊಳದಲ್ಲಿ ಪರಿಶೀಲನೆ ನಡೆಸಿದಾಗ ಬಾಲಕನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಮಾಳ ಮಞಳಿ ನಿವಾಸಿ ಅಜೀಶ್‌ರ ಪುತ್ರ ಅಬೇಲ್ ಯುಕೆಜಿ ವಿದ್ಯಾರ್ಥಿಯಾಗಿದ್ದಾನೆ.