9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ: ಆಟೋ ಚಾಲಕ ಬಂಧನ
ಕಾಸರಗೋಡು: 9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕನನ್ನು ಪೊಕ್ಸೋ ಪ್ರಕಾರ ಬಂಧಿಸಲಾಗಿದೆ. ಮಾತಮಂಗಲದಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ ಕಾನಾಯಿ ನಿವಾಸಿ ಅನೀಶ್ (40) ಬಂಧಿತ ಆರೋಪಿ. ಜೂನ್ ೪ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅನೀಶ್ ಬಾಲಕಿಯ ತಾಯಿಯನ್ನು ಈ ಹಿಂದೆ ಸೋಶ್ಯಲ್ ಮೀಡಿಯಾ ಮೂಲಕ ಪರಿಚಯಗೊಂಡಿದ್ದನು. ಅನಂತರ ಅನೀಶ್, ಬಾಲಕಿಯ ತಾಯಿಯಾದ ಯುವತಿ ಹಾಗೂ ಮೂವರು ಮಕ್ಕಳು ಪರಶ್ಶಿನಿ ಕಡವಿಗೆ ತೆರಳಿ ಅಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದರು. ಮುಂಜಾನೆ ೨ ಗಂಟೆ ವೇಳೆಗೆ ಅನೀಶ್ ಬಾಲಕಿಗೆ ಲಾಡ್ಜ್ ಕೊಠಡಿಯಲ್ಲಿ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಕಿರುಕುಳಕ್ಕೊಳಗಾದ ಬಾಲಕಿ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಗೆ ತಲುಪಿದ ಬಾಲಕಿ ವಿಷಯವನ್ನು ಅಧ್ಯಾಪಿಕೆಯಲ್ಲಿ ತಿಳಿಸಿದ್ದು, ಕೌನ್ಸಿಲಿಂಗ್ ನಡೆಸಿದ ಬಳಿಕ ಚೈಲ್ಡ್ ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ಮಾಹಿತಿ ಯಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಘಟನೆ ನಡೆದಿರುವುದು ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದು ದರಿಂದ ಪ್ರಕರಣವನ್ನು ಅಲ್ಲಿಗೆ ಹಸ್ತಾಂತರಿಸಲಾಗಿದೆ. ಡಿವೈಎಸ್ಪಿ ಕೆ.ಇ ಪ್ರೇಮಚಂದ್ರನ್, ಇನ್‌ಸ್ಪೆಕ್ಟರ್ ಬಾಬು ಮೋನ್, ಎಸ್‌ಐ ದಿನೇಶನ್ ಎಂಬಿವರ ನೇತೃತ್ವದಲ್ಲಿ ನಿನ್ನೆ ಮಾತ ಮಂಗಲಕ್ಕೆ ತಲುಪಿದ ಪೊಲೀಸರು ಅನೀಶ್‌ನನ್ನು ಬಂಧಿಸಿದ್ದಾರೆ.